ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ.
ಶಂಕಿತ ಾರೋಪಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎನ್ಐಎ, ಆರೋಪಿ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.

ನಗರದ ಹೆಚ್ ಎಎಲ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಟೈಮರ್ ಚಾಲಿತ ಕಚ್ಚಾ ಬಾಂಬ್ ಅನ್ನು ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ ಸುಮಾರು ಹತ್ತು ಜನರು ಗಾಯಗೊಂಡಿದ್ದರು. ಗ್ರಾಹಕರ ಸೋಗಿನಲ್ಲಿ ಬಂದಿದ್ದ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ, ತಟ್ಟೆ ತೊಳೆಯುವ ಜಾಗದಲ್ಲಿ ಬ್ಯಾಗ್ ಇಟ್ಟು ತೆರಳಿದ್ದಾನೆ. ಶುಕ್ರವಾರ ಮಧ್ಯಾಹ್ನ ಸುಮಾರು 12.55 ಗಂಟೆಗೆ ಸ್ಪೋಟ ಸಂಭವಿಸಿತ್ತು.

ಸಿಸಿಬಿ ಪೊಲೀಸರು ಮತ್ತು ಎನ್ಐಎ ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿನ ಬಾಂಬರ್ ಭಾವಚಿತ್ರವನ್ನು ಎನ್ಐಎ ಹಂಚಿಕೊಂಡಿದ್ದು, ಸೂಕ್ತ ಮಾಹಿತಿ ನೀಡಲು ಕೋರಿದೆ.