ತುಮಕೂರು : ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು ಪ್ರತಿಪಕ್ಷ ಒತ್ತಾಯಿಸುತ್ತಿರುವ ಮಧ್ಯೆಯೇ ಕಾಂಗ್ರೆಸ್ ಸಚಿವ ಕೂಡ ವಿರೋಧ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.
ನಾಸೀರ್ ಹುಸೇನ್ ಅವರ ಪಾತ್ರ ಘೋಷಣೆ ಕೂಗಿದ್ದರಲ್ಲಿ ಇದ್ದಲ್ಲಿ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಬಿಡಬಾರದು ಎಂದು ಕಾಂಗ್ರೆಸ್ ಸಚಿವ ಕೆ ಎನ್ ರಾಜಣ್ಣ ಹೇಳಿರುವುದು ಇದೀಗ ವಿವಾದಕ್ಕೆಡೆ ಮಾಡಿದೆ. ಸ್ವಪಕ್ಷದ ವಿರುದ್ಧ ಅಚ್ಚರಿಯ ಹೇಳಿಕೆ ನೀಡಿ ಪಕ್ಷವನ್ನು ಇರಿಸು ಮುರಿಸು ಸ್ಥಿತಿಗೆ ತಂದಿಟ್ಟಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ನಾಸೀರ್ ಹುಸೇನ್ ಪಾತ್ರ ಇದ್ದಲ್ಲಿ ಮಾತ್ರ ಬಿಜೆಪಿಯವರು ತಡೆಯಲಿ ಎಂದು ಹೇಳಿದರು. ಹಾಗೆಯೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಸಮಾಜಘಾತುಕ ಕೆಲಸ ಮಾಡುವವರ ವಿರುದ್ಧ ಶೂಟ್ ಔಟ್ ಕಾನೂನು ತರಬೇಕು ಎಂದು ಆಗ್ರಹಿಸಿದರು.