ಬಳ್ಳಾರಿ : ಮುಂಬರುವ ಲೋಕಸಭೆ ಚುನಾವಣೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಳೆದ ವಿಧಾನಸಭೆ ಚುನಾವಣೆ ಸೋತಿದ್ದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸ್ಪರ್ಧಿಸಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ತಮ್ಮ ಅಭ್ಯರ್ಥಿಯನ್ನೂ ಕಣಕ್ಕಿಳಿಸುತ್ತೇನೆ ಎಂಬ ಗಾಲಿ ಜನಾರ್ಧನ ರೆಡ್ಡಿ ಹೇಳಿಕೆಯಿಂದ ಶ್ರೀರಾಮುಲು ತಬ್ಬಿಬ್ಬುಗೊಂಡಿದ್ದಾರೆ.
ಗಾಬರಿಯಾಗಿರುವ ಶ್ರೀರಾಮುಲು, ಈ ಸಂಬಂಧ ಜನಾರ್ಧನ ರೆಡ್ಡಿ ಅವರ ಮನವೊಲಿಸಲು ಎಲ್ಲಾ ಕಸರತ್ತುಗಳನ್ನು ಆರಂಭಿಸಿದ್ದಾರೆ. ಆದರೆ, ಎರಡು ದಿನಗಳ ಹಿಂದೆಯಷ್ಟೇ ಜನಾರ್ಧನ ರೆಡ್ಡಿ ತಮ್ಮ ಪಕ್ಷದ ಮುಖಂಡರ ಸಭೆ ನಡೆಸಿ, ಬಳ್ಳಾರಿ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸಿದ್ದಾರೆ.

ಕೆಆರ್ ಪಿಪಿಯಿಂದ ಅಭ್ಯರ್ಥಿಯನ್ನು ನಿಲ್ಲಿಸಿದ್ದೇ ಆದ್ದಲ್ಲಿ ಮತ ಹಂಚಿಕೆಯಾಗಲಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಡಿಮೆಯಾಗಲಿವೆ ಎಂದು ಶ್ರೀರಾಮುಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಮನವರಿಕೆಗೆ ಯತ್ನ ಮುಂದುವರೆದಿದೆ.

ಜನಾರ್ಧನ ರೆಡ್ಡಿ ಅವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೂತನ ಪ ಆರಂಭಿಸಿದಾಗ ಶ್ರೀರಾಮುಲು ಯಾವುದೇ ರೀತಿಯಲ್ಲಿ ಬೆಂಬಲ ನೀಡಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಮ್ಮ ಪತ್ನಿ ಹಾಗೂ ತಮಗೂ ಯಾವುದೇ ರೀತಿಯಲ್ಲಿ ಕೆಲಸ ಮಾಡಿಲ್ಲ, ಅಂದು ಹಾಗೆ ಮಾಡಿ ಇದೀಗ ತಮ್ಮ ಸಹಾಯ ಕೇಳುತ್ತಿರುವುದು ಎಷ್ಟು ಸರಿ ಎಂದು ಮುಖಂಡರ ಸಭೆಯಲ್ಲಿ ಜನಾರ್ಧನ ರೆಡ್ಡಿ ತಮ್ಮ ಅಭಿಪ್ರಾಯ ತಿಳಿಸಿದ್ದರು ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ರಾಜ್ಯ ಸಬೆ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಇದೀಗ ಬಳ್ಳಾರಿಯಲ್ಲಿ ಅಭ್ಯರ್ಥಿಯನ್ನು ಹಾಕುವುದರ ಮೂಲಕ ಮತ ವಿಭಜನೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.