ಬೆಂಗಳೂರು : ಇವತ್ತಿನ ರಾಜಕಾರಣ ಬಹಳ ನೋವಾಗುತ್ತಿದೆ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದವರ ಜೊತೆ ಸೇರಿದ್ದಾರೆ, ಅವರ ಜತೆ ಸೇರಿಕೊಂಡಿರುವುದಕ್ಕೆ ಬೇಸರವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಕ್ಕು, ವ್ಯಂಗ್ಯವಾಡಿದರು.
ಬೆಂಗಳೂರಿನ ಸದಾಶಿವನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಲು ಬಿಎಸ್ ಯಡಿಯೂರಪ್ಪ, ಸಿ ಪಿ ಯೋಗೇಶ್ವರ್ ಅವರೆಲ್ಲ ಕಾರಣ, ಈಗ ಅವರ ಜೊತೆಗೇ ಇವರು ಸೇರಿದ್ದಾರೆ, ಅವರ ಜೊತೆ ಸೇರಿರೋದು ನೋವಾಗುತ್ತಿದೆ ಎಂದು ಡಿಕೆ ಶಿವಕುಮಾರ್ ನಕ್ಕರು.
ದಳದವರಿಗೂ ಬಿಜೆಪಿಯವರಿಗೂ ಕೇಳ್ತಾ ಇದ್ದೀನಿ, ರಾಜಕೀಯಕ್ಕೆ ಒಂದು ಸಿದ್ದಾಂತವೇನಾದ್ರೂ ಇರಬೇಕಲ್ಲ, ಕುಮಾರಸ್ವಾಮಿ ಅವರು ಹೇಗೆ ಇದನ್ನ ಜೀರ್ಣ ಮಾಡ್ತಾ ಇದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಡಿಕೆ ಶಿವಕುಮಾರ್ ಅವರು ಲೇವಡಿ ಮಾಡಿದರು.
ನಮ್ಮ ಮನೆಗೂ ಟ್ಯಾಂಕರ್ ನೀರು ಹಾಕಿಸುತ್ತಿದ್ದೇನೆ
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಬಿಜೆಪಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟು ಬೇರೆನೂ ಇಲ್ಲ, ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚರಿತ್ರೆಯಲ್ಲಿ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು, ಈ ದಂಧೆಗೆ ಕಡಿವಾಣ ಹಾಕಿರೋದು ನಾವು, ದರ ಫಿಕ್ಸ್ ಬಗ್ಗೆ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ, ಕಾವೇರಿ ನೀರಿಗಾಗಿ ಹಾಹಾಕಾರ ಇಲ್ಲ ಅಂತ ನಾವು ಹೇಳ್ತಾ ಇಲ್ಲ, ನಮ್ಮ ಮನೆಯಲ್ಲೂ ಬೋರ್ ವೆಲ್ ನಲ್ಲಿ ನೀರು ಇಲ್ಲ, ಬೇರೆ ಕಡೆಯಿಂದ ನೀರು ತರಿಸ್ತಿದ್ದೇವೆ ಎಂದರು.
ಕಾರು ತೊಳೆಯಲು, ದನ ಕರು ತೊಳೆಯಲು ಕಾವೇರಿ ನೀರು ಬಳಸಬೇಡಿ ಅಂತ ಹೇಳಿದ್ದೇವೆ, ಆರ್ ಓ ವಾಟರ್ ಕೆಟ್ಟಿರುವ ಕಡೆ ಸರಿ ಮಾಡ್ತಿದ್ದೇವೆ ಎಂದರು. ಹಾಗೆಯೇ ಇದನ್ನು ಕಂಟ್ರೋಲ್ ಮಾಡಲು ಬೆಂಗಳೂರು ಗ್ರಾಮಾಂತರಕ್ಕೆ ನೋಡಲ್ ಆಫೀಸರ್ ನೇಮಕ ಮಾಡಿದ್ದೇವೆ. ಬೆಂಗಳೂರು ನಗರಕ್ಕೂ ಹಾಕಿದ್ದೇವೆ ಎಂದರು.
ರಾಜ್. ಸರ್ಕಾರ ಬರಗಾಲ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಬಿಜೆಪಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿ ಪ್ರತಿಭಟನೆ ಮಾಡಲಿ ಬಿಡಿ, ನಾವ್ಯಾರು ತಡೆಯಲ್ಲ ಎಂದು ಡಿಕೆ ಶಿವಕುಮಾರ್ ಅಪಹಾಸ್ಯ ಮಾಡಿದರು.