Lok Sabha Election: ಲೋಕಸಭೆ ಚುನಾವಣೆ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿ ಘೋಷಣೆಗೂ ಮುನ್ನ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಮುಖಂಡರ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಹೀಗಾಗಿ ಮಿತ್ರಪಕ್ಷ ಬಿಜೆಪಿ ಜತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖಂಡರಿಗೆ ತಾಕೀತು ಮಾಡಿದರು.

ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ ಅವರು; ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮುಖಂಡರು ಮಾಡಿದ ಒತ್ತಾಯವನ್ನು ಕುಮಾರಸ್ವಾಮಿ ಅವರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ನಯವಾಗಿ ತಿರಸ್ಕರಿಸಿದರು.

ಜೆಡಿಎಸ್ -ಬಿಜೆಪಿ ಮೈತ್ರಿಯ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟ ಮಾಜಿ ಮುಖ್ಯಮಂತ್ರಿಗಳು; ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ಎಲ್ಲರೂ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಅವರು ಎನ್‌ ಡಿಎ ಅಭ್ಯರ್ಥಿಯೇ ಆಗಿರುತ್ತಾರೆ. ಅವರ ಗೆಲುವಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ನೇರ ಮಾತುಗಳಲ್ಲಿ ಮುಖಂಡರಿಗೆ ತಿಳಿಸಿದರು.

ಇದೇ ವೇಳೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡಸಿದರು ಹಾಗೂ ಮುಖಂಡರಿಂದ ಸಲಹೆ ಪಡೆದು, ತಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.

ಕ್ಷೇತ್ರದಲ್ಲಿ ಪಕ್ಷಕ್ಕೆ ಅನ್ಯಾಯ ಆಗದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡುವಂತೆ ಮನವಿ ಮಾಡಿದ ಮುಖಂಡರು, ಆಕಾಂಕ್ಷಿಗಳ ಬಗ್ಗೆಯೂ ಚರ್ಚೆ ನಡೆಸಿದರು. ಹಲವು ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು.

ಜೆಡಿಎಸ್- ಬಿಜೆಪಿ ಒಂದಾಗಿ ಎದುರಿಸಿದರೆ ಖಚಿತವಾಗಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಗೆಲ್ಲಬಹುದು. ಹಿಂದೆ ಬಿ.ಎನ್. ಬಚ್ಚೇಗೌಡರ ಗೆಲುವಿನಲ್ಲಿ ಜೆಡಿಎಸ್ ಪಾತ್ರ ದೊಡ್ಡದಿತ್ತು. ಆದ್ದರಿಂದ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಬೇಕು ಎಂದು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದ ಕ್ಷೇತ್ರದ ಮುಖಂಡರು.

ಈ ಬಗ್ಗೆ ತಾವು ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸುವುದಾಗಿ ಮುಖಂಡರಿಗೆ ತಿಳಿಸಿದ ಮಾಜಿ ಮುಖ್ಯಮಂತ್ರಿಗಳು; ಕ್ಷೇತ್ರ ಯಾವ ಪಕ್ಷದ ಪಾಲಾದರೂ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಾ ಹಂತದಲ್ಲಿಯೂ ಮಿತ್ರಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ವಿಶ್ವಾಸ-ನಂಬಿಕೆಯಿಂದ ದುಡಿಮೆ ಮಾಡಬೇಕು.‌ ಅಭ್ಯರ್ಥಿ ಆಯ್ಕೆ ಬಗ್ಗೆ ಮಿತ್ರಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸುವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾದ ಕೆ.ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಇ.ಕೃಷ್ಣಪ್ಪ, ಹೆಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನೇಗೌಡ, ಕ್ಷೇತ್ರದ ಹಿರಿಯ ಮುಖಂಡರಾದ ಮುನೇಗೌಡ, ಡಿ. ಜೆ.ನಾಗರಾಜ್ ರೆಡ್ಡಿ, ನರಸಿಂಹ ಮೂರ್ತಿ, ಹರೀಶ್‌ ಗೌಡ , ಅಪ್ಪಣ್ಣಯ್ಯ, ಮಧು, ಹೊಸಕೋಟೆ ಶ್ರೀಧರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

More News

You cannot copy content of this page