ನವದೆಹಲಿ : ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ನೀಡಲು ಸುಪ್ರೀಂಕೋರ್ಟ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ವಿವರಗಳನ್ನು ಎಸ್ ಬಿ ಐ ಮಂಗಳವಾರ ಸಲ್ಲಿಕೆ ಮಾಡಿದೆ.
ಬಾಂಡ್ ಗಳ ಮುಖಬೆಲೆ, ಅದನ್ನು ಖರೀದಿಸಿದವರ ಹೆಸರು, ಯಾವ ಪಕ್ಷಕ್ಕೆ ನೀಡಲಾಗಿದೆ ಹಾಗೂ ದಿನಾಂಕ ಎಲ್ಲಾ ವಿವರಗಳನ್ನು ಎಸ್ ಬಿ ಐ ಬ್ಯಾಂಕ್ ಸುಪ್ರೀಂಕೋರ್ಟ್ ಗೆ ಸಲ್ಲಿಕೆ ಮಾಡಿದ್ದು, 2019ರ ಏಪ್ರಿಲ್ 14 ರಿಂದ 2024 ಫೆಬ್ರುವರಿ 15 ರವರೆಗಿನ ಎಲ್ಲಾ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆ ಮಾಡಿದೆ.
ಇನ್ನು ಈ ವಿವರಗಳನ್ನು ನ್ಯಾಯಾಲಯದಿಂದ ಪಡೆದು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಹಾಕಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಇದರಿಂದ ಯಾರು, ಯಾವ ಪಕ್ಷಕ್ಕೆ ಎಷ್ಟು ಹಣ ನೀಡಿದ್ದಾರೆ ಎಂಬ ವಿವರಗಳು ಸದ್ಯದಲ್ಲೇ ಲಭ್ಯವಾಗಲಿವೆ.
ಚುನಾವಣಾ ಬಾಂಡ್ ಗಳು ಮಾಹಿತಿ ಹಕ್ಕನ್ನು ಉಲ್ಲಂಘನೆ ಮಾಡುತ್ತಿವೆ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಇದನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಅಸಾಂವಿಧಾನಿಕ ಎಂದು ಹೇಳಿ ಫೆಬ್ರುವರಿ 15 ರಂದು ನಿಷೇಧಿಸಿತ್ತು.