ಮೈಸೂರು : ಎರಡು ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ಮೂರನೇ ಬಾರಿಗೆ ಅವಕಾಶ ವಂಚಿತರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇವರ ಬದಲಿಗೆ ರಾಜ ವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೇಟ್ ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ನಾನು ಯಾವುದೇ ಕಾರಣಕ್ಕೂ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಜೀವ ಇರುವವರೆಗೂ ನಾನು ಮೋದಿ ಭಕ್ತ, ಯಾರು ಏನೇ ಕೊಡುತ್ತೇನೆ ಎಂದರೂ ನಾನು ಎಲ್ಲೂ ಹೋಗುವುದಿಲ್ಲ, ಸಾಯುವವರೆಗೂ ನಾನು ಬಿಜೆಪಿ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.
ಟಿಕೆಟ್ ವಿಚಾರದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಎಳೆದುತರಬೇಡಿ ಎಂದು ಹೇಳಿದ ಅವರು, ಬಿಎಸ್ ವೈ ಪಕ್ಷ ಕಟ್ಟಿದ್ದಾರೆ. ಕರ್ನಾಟಕಕ್ಕೆ ಯಡಿಯೂರಪ್ಪ ಒಂದು ರೀತಿಯಲ್ಲಿ ಮೋದಿ ಇದ್ದಹಾಗೆ, ಪ್ರಧಾನಿ ಮೋದಿ ನನಗೆ ಸದಾ ಪ್ರೇರಣೆ ಎಂದು ತಿಳಿಸಿದರು.
ಮೋದಿಯವರು ಏನೇ ನಿರ್ಧಾರ ಕೈಗೊಂಡರು ನಾನು ಸ್ವೀಕರಿಸುತ್ತೇನೆ, ಅವರಿಗಿಂತ ದೊಡ್ಡದು ಏನು ಇಲ್ಲಾ. ಅವಕಾಶ ಕೊಟ್ಟರೂ ತೃಪ್ತಿ ಿದೆ, ಕೊಡದಿದ್ದರೂ ತೃಪ್ತಿ ಇದೆ ಎಂದರು. ಟಿಕೇಟ್ ಕೈ ತಪ್ಪಿದರೆ ಯಾರೂ ಪ್ರತಿಭಟನೆ ಮಾಡಬಾರದು ಎಂದು ಅವರ ಬೆಂಬಲಿಗರಲ್ಲಿ ಮನವಿ ಮಾಡಿದರು.