ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ ನ ಈ ಸಾಲಿನ ಟ್ಟೆಂಟಿ-10 ಕ್ರಿಕೆಟ್ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಮಧ್ಯೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ತ್ಯಜಿಸಿದ್ದಾರೆ.
OFFICIAL STATEMENT: MS Dhoni hands over captaincy to Ruturaj Gaikwad. #WhistlePodu #Yellove
— Chennai Super Kings (@ChennaiIPL) March 21, 2024
ಯುವ ಭರವಸೆಯ ಆಟಗಾರ ಋತುರಾಜ್ ಗಾಯಕವಾಡ್ ಸಿಎಸ್ ಕೆ ತಂಡದ ನೂತನ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಇದರಿಂದ ಯುವ ಆಟಗಾರರಿಗೆ ಚನ್ನೈ ಸೂಪರ್ ಕಿಂಗ್ಸ್ ಮಣೆ ಹಾಕಿದೆ.
ಪ್ರಸಕ್ತ ಸಾಲಿನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 22 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.

42 ವರ್ಷ ವಯಸ್ಸಿನ ಎಂ ಎಸ್ ಧೋನಿ ಸಿಎಸ್ ಕೆ ತಂಡದ ನಾಯಕರಾಗಿದ್ದಾಗ ಐದು ಬಾರಿ ಪ್ರಶಸ್ತಿಯನ್ನು ಮುತ್ತಿಕ್ಕಿದೆ. ಪ್ರಸಕ್ತ ಸಾಲಿನ ಟೂರ್ನಿ ಧೋನಿ ಪಾಲಿಗೆ ಕೊನೆಯ ಪಂದ್ಯವಾಗಲಿದೆ, ನಂತರ ಅವರು ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಾಳೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ಇಂದು ಧೋನಿ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಕುರಿತು ಸಿಎಸ್ ಕೆ ತಂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಪ್ರಕಟಿಸಿದೆ.
ಕಳೆದ ವರ್ಷ ನಡೆದ 16 ಪಂದ್ಯಾವಳಿಯಲ್ಲಿ ಗಾಯಕವಾಡ್ 590 ರನ್ ಗಳಿಸಿದ್ದರು. ಒಟ್ಟು ಇದುವರೆಗೂ 52 ಪಂದ್ಯಗಳನ್ನು ಆಡಿದ್ದಾರೆ.