ಬೆಂಗಳೂರು : ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ವಿಶೇಷವಾಗಿ ಗಮನ ಹರಿಸಿ ಎಂದು ಡಿಸಿಎಂ ಅವರಿಗೆ ಮನವಿ ಮಾಡಲು ಅವರನ್ನು ಭೇಟಿ ಮಾಡಿದ್ದೇವೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಬಿಜೆಪಿ ರೆಬಲ್ ಶಾಸಕರೆಂದೇ ಗುರುತಿಸಿಕೊಂಡಿರುವ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ಡಿಸಿಎಂ ಭೇಟಿಗೆ ಒಂದೇ ಕಾರಿನಲ್ಲಿ ಆಗಮಿಸಿದ ರೆಬಲ್ ಶಾಸಕರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಟಿ ಸೋಮಶೇಖರ್, ನೀರಿನ ಸಮಸ್ಯೆ ಬಗೆಹರಿಸಲು BWSSB ಅಧಿಕಾರಿಗಳಿಗೆ ಡಿಸಿಎಂ ಸೂಚನೆ ನೀಡಿದ್ದಾರೆ ಎಂದರು.

ಬಿಜೆಪಿ ನೀಡಿದ ನೋಟಿಸ್ ಗೆ ಉತ್ತರ ನೀಡಿದ್ದೇನೆ
ಬಿಜೆಪಿಯವರು ನೀಡಿರುವ 1 ಪೇಜ್ ನೋಟೀಸ್ ಗೆ 170 ಪೇಜ್ ಗಳ ವಿವರಣೆ ನೀಡಲಾಗಿದೆ, ಅವರು ಹೇಳಿದ ಪ್ರಶ್ನೆಗೆ ತಕ್ಕ ಉತ್ತರ ನೀಡಲಾಗಿದೆ, ಹಿಮಾಚಲ ಪ್ರದೇಶ, ಗುಜರಾತ್ ನಲ್ಲಿ ಏನು ಮಾಡಿದ್ದಾರೆ ಅದೆಲ್ಲ ಕ್ರೂಡೀಕರಿಸಿ ಉತ್ತರ ನೀಡಲಾಗಿದೆ, ಬೇರೆ ಬೇರೆ ರಾಜ್ಯಗಳ ಸ್ಟ್ಯಾಂಡ್ ಏನು ಎಂಬ ಬಗ್ಗೆ ಉತ್ತರ ನೀಡಲಾಗಿದೆ ಎಂದು ವಿವರಿಸಿದರು.
ನನ್ನ ಕ್ಷೇತ್ರಕ್ಕೆ ನಾನು ಹೋಗಲು ಭಯವಾಗುತ್ತಿದೆ
ನನ್ನ ಕ್ಷೇತ್ರದ ಸಂಸದರಾಗಿ ಸದಾನಂದಗೌಡ ಹಾಗೂ ಚಂದ್ರೇಗೌಡ ಅವರು ಕೆಲಸ ಮಾಡಿದ್ದಾರೆ, ಇದೀಗ ನಾನು ನನ್ನ ಕ್ಷೇತ್ರಕ್ಕೆ ಹೋಗಲು ಭಯ ಆಗುತ್ತಿದೆ, ಯಾರನ್ನ ಯಾರ ಮೇಲೆ ಎತ್ತಿ ಕಟ್ಟುತ್ತಾರೋ ಅನ್ನೂ ಭಯ ಕಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು.
ಅವರು ಬೆಂಕಿ ಉಂಡೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಇವರೇನು ಎಂ ಪಿ ಆಗಲು ಬಂದಿದಾರಾ? ಬೆಂಕಿ ಹಚ್ಚಲು ಬಂದಿದಾರಾ? ಹೀಗೇ ಆದ್ರೆ ಕಮಿಷನರ್ ಭೇಟಿ ಆಗುವ ಸೂಚನೆಯನ್ನು ಶಾಸಕ ಸೋಮಶೇಖರ್ ಸುಳಿವು ನೀಡಿದರು.
ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ನಾನು ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬಂದಿದ್ದೆ, ನೊಟೀಸ್ ನನಗೂ ಅವರಿಗೂ ಸೇಮ್ ಕೊಟ್ಟಿದ್ದಾರೆ, ಅವರು ವೋಟ್ ಬೇರೆ ಹಾಕಿದ್ರು, ನಾನು ಅಬ್ಸೆಂಟ್ ಆಗಿದ್ದೆ, ಅವರಂತೆ ನಾನು ವಿವರಣೆ ಕೊಟ್ಟಿದ್ದೇನೆ ಎಂದರು.
ನನ್ನ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಹಾಕಿಲ್ಲ, ನಾವು ಕಾಯುತ್ತಿದ್ದೇವೆ ಎಂದು ಬಿಜೆಪಿಯ ಅರೆಬೈಲು ಶಾಸಕ ಶಿವರಾಂ ಹೆಬ್ಬಾರ್ ತಿಳಿಸಿದರು.