ಬೆಂಗಳೂರು : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೊನೆಗೂ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಜಗದೀಶ್ ಶೆಟ್ಟರ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ವರಿಷ್ಠರು ಇಂದು ರಾಜ್ಯದಲ್ಲಿ ಬಾಕಿ ಉಳಿದಿರುವ ನಾಲ್ಕು ಲೋಕಸಭಾ ಕ್ಷೇತ್ರಗಳ ಟಿಕೇಟ್ ಅನ್ನು ಪ್ರಕಟಿಸಿದೆ. ಬೆಳಗಾವಿ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಹೈಕಮಾಂಡ್ ಟಿಕೆಟ್ ನೀಡಿದೆ. ಬೆಳಗಾವಿಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಒತ್ತಾಯಿಸಿದರು. ಆದರೂ ಕೂಡ ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರಿಗೆ ಮಣೆ ಹಾಕಿದೆ.

ಇನ್ನು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ ಸುಧಾಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರಕ್ಕೆ ಯಲಹಂಕ ಶಾಸಕ ಎಸ್ ವಿಶ್ವನಾಥ್ ತಮ್ಮ ಪುತ್ರನಿಗೆ ಟಿಕೇಟ್ ಗಾಗಿ ಸಾಕಷ್ಟು ಲಾಭಿ ನಡೆಸಿದ್ದರು. ಇದು ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರು ತಮಗೆ ಟಿಕೆಟ್ ನೀಡಲು ಆಗ್ರಹಿಸಿದ್ದರು. ಆದರೆ, ಹೈಕಮಾಂಡ್ ಇದ್ಯಾವುದಕ್ಕೂ ಕ್ಯಾರೆ ಎನ್ನದೇ, ಕಾಂಗ್ರೆಸ್ ನಿಂದ ವಲಸೆ ಹೋಗಿ ಬಿಜೆಪಿ ಸೇರಿದ್ದ ಮಾಜಿ ಶಾಸಕ ಸುಧಾಕರ್ ಅವರಿಗೆ ಟಿಕೆಟ್ ನೀಡಿದೆ.
ಅದರಂತೆಯೇ ಸಾಕಷ್ಟು ವಿವಾದದ ಕೇಂದ್ರ ಬಿಂದುವಾಗಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆಗೆ ಟಿಕೆಟ್ ನೀಡದೇ, ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೇಟ್ ನೀಡಲಾಗಿದೆ. ಸಂವಿಧಾನವನ್ನೇ ಬದಲಾಯಿಸಲು ಬಿಜೆಪಿಯ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದು ಹೇಳಿಕೆ ನೀಡಿದ್ದ ಅನಂತ ಕುಮಾರ್ ಹೆಗಡೆಗೆ ಅವರಿಗೆ ಕೊನೆಗೂ ಟಿಕೆಟ್ ನೀಡಿಲ್ಲ.
ಹಾಗೆಯೇ ಬಾಕಿ ಉಳಿದಿದ್ದ ರಾಯಚೂರು ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಕೋಕ್ ನೀಡಿ ರಾಜಾ ಅಮರೇಶ್ವರಾ ನಾಯಕ್ ಅವರಿಗೆ ಟಿಕೇಟ್ ನೀಡಲಾಗಿದೆ.