ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕೊನೆಗೂ ಘೋಷಣೆ ಮಾಡಲಾಗಿದ್ದು, ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಕೆ ಆರ್ ರಮೇಶ್ ಕುಮಾರ್ ಅವರ ಜಗಳದಲ್ಲಿ ಮೂರನೇಯವರಿಗೆ ಲಾಭ ದೊರಕಿದೆ.

ತಮ್ಮ ಸಂಬಂಧಿಕರಿಗೆ ಟಿಕೇಟ್ ನೀಡಬೇಕೆಂದು ಸಚಿವ ಕೆ ಹೆಚ್ ಮುನಿಯಪ್ಪ ಪಟ್ಟು ಹಿಡಿದಿದ್ದರು. ಇದು ಕೋಲಾರ ಕಾಂಗ್ರೆಸ್ ನಲ್ಲಿ ಸಾಕಷ್ಟು ಬೆಳವಣಿಗೆಗೆ ಕಾರಣವಾಗಿತ್ತು. ಮುನಿಯಪ್ಪ ಅವರ ನಿಲುವನ್ನು ಖಂಡಸಿ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಸಭಾಪತಿ ಕಚೇರಿಯವರೆಗೆ ತೆರಳಿ ಅಲ್ಲಿಂದ ವಾಪಾಸ್ಸಾಗಿದ್ದರು.

ಇದೀಗ ಮಾಜಿ ಸಚಿವ ಕೆ ಆರ್ ರಮೇಶ್ ಕುಮಾರ್ ಬಣದ ಕೈ ಮೇಲುಗೈಯಾಗಿದ್ದು, ಮೂರನೇ ವ್ಯಕ್ತಿಗೆ ಟಿಕೆಟ್ ಲಭಿಸಿದೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೆ ಸಿ ವಿಜಯಕುಮಾರ್ ಅವರ ಪುತ್ರ ಕೆ ವಿ ಗೌತಮ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣಿಹಾಕಿದೆ.

ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಗೌತಮ್ ಬೆಂಗಳೂರು ಕೇಂದ್ರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುನಿಯಪ್ಪ ಅವರ ಕುಟುಂಬ ಹೊರತಾಗಿ ಬೇರೆ ಯಾರಿಗಾದರೂ ಟಿಕೆಟ್ ನೀಡಿದರೆ ತಾವು ಒಪ್ಪುವುದಾಗಿ ಘೋಷಿಸಿದ್ದರು.

ಆದರೆ, ಕೆ ಹೆಚ್ ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕಂದು ಸಾಕಷ್ಟು ಲಾಭಿ ನಡೆಸಿದ್ದರು. ಇದೀಗ ಮುನಿಯಪ್ಪ ಅವರ ನಡೆ ಯಾವ ರೀತಿಯಲ್ಲಿರಲಿದೆ ಎನ್ನುವುದು ನಿಗೂಢವಾಗಿದೆ.
ಗೌತಮ್ ಅವರ ಎದುರಾಳಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಕಣದಲ್ಲಿದ್ದಾರೆ. ಇವರು ಬೋವಿ ಸಮುದಾಯದಕ್ಕೆ ಸೇರಿದ್ದಾರೆ. ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಇವರು ಈಗಾಗಲೇ ಎರಡು ಬಾರಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.