ಕರ್ನಾಟಕದಲ್ಲಿ ಲೋಕಭಾ ಚುನಾವಣಾ ಕಾವು, ಆರೋಪ ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆ್ಚಾಗುತ್ತಲೆ ಇದೆ. ಮಂಡ್ಯದಲ್ಲಂತೂ ಮೈತ್ರಿ ಪಕ್ಷಗಳ ನಿದ್ದೆಯನ್ನು ಸಂಸದೆ ಸುಮಲತಾ ಕೆಡಿಸಿದ್ದಾರೆ. ಮಂಡ್ಯ ಹಾಲಿ ಸಂಸದೆ ಸುಮಲತಾ ಅವರ ನಡೆ ನಿಗೂಢವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ಟೆನ್ಸನ್ ಶುರುವಾಗಿದೆ.
ಕಳೆದ ಬಾರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ಮತ್ತು ಹಾಲಿ ಸಂಸದೆ ಸುಮಲತಾ ಅಂಬರೀಷ್ ನಡುವಿನ ಸ್ಪರ್ಧೆ ಬಾರಿ ಸದ್ದು ಮಾಡಿತ್ತು. ಈ ಬಾರಿ ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಗೆಯೇ ಸಂಸದೆ ಸುಮಲತಾ ಅಂಬರೀಷ್ ಅವರು ತಮ್ಮ ನಿರ್ಧಾರವನ್ನು ಏಪ್ರಿಲ್ 3 ಕ್ಕೆ ತಿಳಿಸುವುದಾಗಿ ಹೇಳಿದ್ದಾರೆ. ಸುಮಲತಾ ಅವರ ಈ ಹೇಳಿಕೆ ಮೈತ್ರಿ ಪಕ್ಷದ ಮುಖಂಡರುಗಳಲ್ಲಿ ಟೆನ್ಸನ್ ಹೆಚ್ಚಿಸಿದೆ. ಅವರ ನಿರ್ಧಾರಕ್ಕಾಗಿ ಎಲ್ಲಾ ಮುಖಂಡರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಇದರ ನಡುವೆ ಹಳೆಯ ವೈಷಮ್ಯವನ್ನೆಲ್ಲಾ ಬಿಟ್ಟು ಸುಮಲತಾ ಅಂಬರೀಷ್ ಅವರ ಮನೆಗೆ ತೆರಳಿದ ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ, ಮನವೊಲಿಸೋ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದರೆ, ಸುಮಲತಾ ಮಾತ್ರ ತಮ್ಮ ಗುಟ್ಟನ್ನು ಏಪ್ರಿಲ್ 3 ಕ್ಕೆ ತಿಳಿಸುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ.

ನಾನು ಎಪ್ರಿಲ್ 4 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಹಕಾರ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರಂತೆ. ಭೇಟಿ ವೇಳೆ ಆರೋಗ್ಯಕರ ಚರ್ಚೆ ನಡೆದಿದೆ. ಫಲಪ್ರದವಾಗಲಿದೆ ಎಂದು ತಿಳಿಸಿದ್ದಾರೆ.
ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧೆಗೆ ಕುಮಾರಸ್ವಾಮಿ ಸಿದ್ದರಾಗಿದ್ದಾರೆ ಆದರೆ, ಸುಮಲತಾ ಅವರ ನಡೆ ಮಾತ್ರ ಇವರಿಗೆ ಆತಂಕ ಸಷ್ಟಿಸಿದೆ.
ಸುಮಲತಾ ಈಗಾಗಲೇ ಒಂದು ನಿರ್ಧಾರಕ್ಕೆ ಬಂದಂತಿದೆ. ಆದರೆ, ಅದೇನು ಅಂತ ಮಾತ್ರ ಅವರು ಬಹಿರಂಗಪಡಿಸುತ್ತಿಲ್ಲ. ಮಂಡ್ಯದಲ್ಲಿಯೇ ಅದನ್ನು ಏಪ್ರಿಲ್ 3 ರಂದು ಬಹಿರಂಗಪಡಿಸುತ್ತೇನೆ ಎನ್ನುತ್ತಿದ್ದಾರೆ. ಇದರ ನಡುವೆ ಅವರ ಪರಮಾಪ್ತ ಸಚ್ಚಿದಾನಂದ ಮಾತ್ರ ಈಗಾಗಲೇ ಮೈತ್ರಿ ಪರವಾಗಿ ಮತಯಾಚಿಸುವ ಕೆಲಸಕ್ಕೆ ಕೈಹಾಕಿದ್ದಾರೆ.
ಇದನ್ನು ಗಮನಿಸಿದರೆ, ಸುಮಲತಾ ಬಿಜೆಪಿ- ಜೆಡಿಎಸ್ ಮೈತ್ರಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆಗಳಿವೆ. ಆದರೆ, ಅವರು ಬಿಜೆಪಿ ಸೇರುತ್ತಿಲ್ಲ, ಪ್ರಚಾರಕ್ಕೆ ಹೋಗದೇ ಸುಮ್ಮನಾಗಲಿದ್ದಾರೆ, ಹಾಗೆಯೇ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿಲ್ಲ, ಇನ್ನೊಂದೆಡೆ ಅವರು ಕಾಂಗ್ರೆಸ್ ಗೂ ಸೇರ್ಪಡೆಯಾಗುತ್ತಿಲ್ಲ ಎಂದು ಅವರ ಆಪ್ತ ವಲಯ ತಿಳಿಸಿದ್ದಾರೆ.
ಕಳೆದ ಚುನಾವಣೆ ಅಂದರೆ 2019ರ ಪರಿಸ್ಥಿತಿ ಈಗಿಲ್ಲ. ಮಂಡ್ಯದ ಜನ ಸುಮಲತಾ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಒಂದು ವೇಳೆ ಅವರು ಮೈತ್ರಿ ವಿರುದ್ಧ ಸುಮಲತಾ ಅವರು ನಡೆದುಕೊಂಡರೆ, ಭವಿಷ್ಯದಲ್ಲಿ ಸಂಕಷ್ಟ ಕಾಡಲಿದೆ ಎನ್ನಲಾಗುತ್ತಿದೆ. ಆದ್ದರಿಂದ ಅವರು ಮೈತ್ರಿಗೆ ಬೆಂಬಲ ಸೂಚಿಸುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ.