Search

DCM DK SHIVAKUMAR: ರೇಟ್ ಫಿಕ್ಸ್, ಬ್ಲಾಕ್ ಮೇಲ್ ಮಾಡುವುದು ಕುಮಾರಸ್ವಾಮಿ ಗುಣ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಳಗಾವಿ: “ಕುಮಾರಸ್ವಾಮಿ ಅವರು ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ, ರೇಟ್ ಫಿಕ್ಸ್ ಮಾಡುವ ಚಾಳಿ ನಿನಗೆ ಇರಬೇಕು. ಅದನ್ನು ಬೇರೆಯವರ ಮೇಲೆ ಹಾಕುತ್ತಿದ್ದೀರಾ. ನಾವು ರಾಜ್ಯದ ಮಹಿಳೆಯರು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ನೀಡಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಬೆಳಗಾವಿಯಲ್ಲಿ ಡಿಸಿಎಂ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು.

ಈ ವೇಳೆ ಮಾಧ್ಯಮಗಳು, “ಮಹಿಳೆಯರಿಗೆ ಡಿ.ಕೆ.ಶಿವಕುಮಾರ್ ರೇಟ್ ಫಿಕ್ಸ್ ಮಾಡುತ್ತಾರೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಜನರ ಜೇಬು ಪಿಕ್ ಪಾಕೇಟ್ ಮಾಡುತ್ತಿದೆ” ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;

“ಅವನಿಗೆ ಪಿಕ್ ಪಾಕೆಟ್ ಮಾಡಿ ರೂಡಿ ಅಲ್ಲವೇ? ಹೆದರಿಸಿ, ಬೆದರಿಸಿ ಬ್ಲಾಕ್ ಮೇಲ್ ಮಾಡುವುದು, ಹಿಟ್ ಅಂಡ್ ರನ್ ಮಾಡುವುದು ಅವನ ಕೆಲಸ. ಮಹಿಳೆಯರು ತಿರುಗಿ ಬಿದ್ದಿರುವ ಕಾರಣ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸುತ್ತಿದ್ದು ನನ್ನ ವಿರುದ್ಧ ಟೀಕಿಸುತ್ತಿದ್ದಾರೆ. ಹೆದರಿಕೊಂಡು ಪಕ್ಕದ ಜಿಲ್ಲೆಗೆ ಹೋಗಿರುವ ಮಿಸ್ಟರ್ ಕುಮಾರಸ್ವಾಮಿ, ನೀನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ” ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನವರು ದೇವೇಗೌಡರನ್ನ ಅಧಿಕಾರದಿಂದ ಇಳಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂಬ ಕುಮಾರಸ್ವಾಮಿ ಆಗ್ರಹದ ಬಗ್ಗೆ ಕೇಳಿದಾಗ, “ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದೇ ಕಾಂಗ್ರೆಸ್. ಅವರ ಎಲ್ಲ ಆರೋಪಗಳಿಗೆ ಉತ್ತರಿಸುತ್ತೇನೆ. ಅವರಿಗೆ ಸದನಕ್ಕೆ ಬರಲು ಹೇಳಿ” ಎಂದರು.

ಸದನದಲ್ಲಿ ಚರ್ಚೆಗೆ ಕುಮಾರಸ್ವಾಮಿ ಬರಲಿಲ್ಲ

ಮುಂದಿನ ಜನಾಂಗ ನೀವು ಎಂಥಹಾ ಸುಳ್ಳುಗಾರ ಎಂದು ನೋಡಬೇಕು. ಯಾವುದೇ ಆರೋಪಕ್ಕೂ ದಾಖಲೆ ಇರಬೇಕಲ್ಲವೇ? ಹೀಗಾಗಿ ನನ್ನ ಆಸ್ತಿ, ಅವರ ಆಸ್ತಿ ಬಗ್ಗೆ ಸದನದಲ್ಲಿ ಚರ್ಚಿಸಲು ನಾನು ಆಹ್ವಾನ ನೀಡಿದ್ದೆ. ಆತ ಸದನಕ್ಕೇ ಬರಲಿಲ್ಲ. ಅವರ ಕುಟುಂಬದ ಎಲ್ಲಾ ಸದಸ್ಯರ ಆಸ್ತಿ ಬೆಂಗಳೂರು ಸುತ್ತಾ ಮುತ್ತಾ ಎಷ್ಟಿತ್ತು ಎಂದು ನಾನು ದಾಖಲೆಗಳನ್ನು ತರುತ್ತೇನೆ. ನಾನು ಕಲ್ಲು ಹೊಡೆದಿದ್ದೇನೆಯೇ, ಲೂಟಿ ಮಾಡಿದ್ದೇನೆಯೇ ಎಂಬುದು ಸದನದಲ್ಲಿ ತೀರ್ಮಾನವಾಗಲಿ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುವುದರಲ್ಲಿ ಪ್ರಸಿದ್ಧಿ” ಎಂದರು.

ನೀವು ಎರಡು ಇಲಾಖೆಗಳಿಂದ ಬಾಚಿಕೊಳ್ಳುತ್ತಿದ್ದೀರಿ ಎನ್ನುವ ದೇವೇಗೌಡರ ಆರೋಪದ ಬಗ್ಗೆ ಕೇಳಿದಾಗ “ಅವರು ನನಗೆ ಜೆಸಿಬಿಯನ್ನು ಕೊಡುಗೆಯಾಗಿ ಕಳುಹಿಸಿದ್ದಾರೆ. ಜಮೀನಿನಲ್ಲಿ ಬಾಚುತ್ತಿದ್ದೇನೆ. ತಂದೆ- ಮಗನಿಗೆ ನನ್ನ ಕಂಡರೆ ಬಹಳ ಪ್ರೀತಿ” ಎಂದು ತಿರುಗೇಟು ನೀಡಿದರು.

ದಾರಿತಪ್ಪುತ್ತಿದ್ದಾರೆ ಎಂದರೆ ಏನರ್ಥ?

ದುಡ್ಡುಕೊಟ್ಟು ಹೆಣ್ಣುಮಕ್ಕಳನ್ನು ಪ್ರತಿಭಟನೆಗೆ ಕರೆದುಕೊಂಡು ಬರಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಮಹಿಳೆಯರಿಗೆ ಒಳ್ಳೆಯದಾಗಲಿ ಎಂದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ನಮ್ಮ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರೆ ಏನರ್ಥ? ಇದು ರಾಜ್ಯದ ಮಹಿಳೆಯರ ಸ್ವಾಭಿಮಾನದ ಪ್ರಶ್ನೆ. ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯಕ್ಕೆ ಕಪ್ಪುಚುಕ್ಕೆ. ಈ ಹೇಳಿಕೆಯ ವಿರುದ್ಧ ಪಕ್ಷ ಬೇಧ ಮರೆತು ಎಲ್ಲಾ ಮಹಿಳಾ ಸಂಘಟನೆಗಳು ಹೋರಾಟ ಮಾಡಬೇಕು. ಹಗುರವಾಗಿ ಮಾತನಾಡುವುದರ ಬಗ್ಗೆ ಪ್ರತಿರೋಧ ಒಡ್ಡಬೇಕು. ಎನ್ ಡಿಎ ಮೈತ್ರಿಗೆ ಬುದ್ಧಿ ಕಲಿಸಬೇಕು” ಎಂದರು.

ಕಾಂಗ್ರೆಸ್ ಮಹಿಳಾಮಣಿಗಳಿಗೆ ದುಃಖವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದಾಗ “ಈ ವಿಚಾರದಲ್ಲಿ ಕುಮಾರಸ್ವಾಮಿ ಅವರ ಕ್ಷಮಾಪಣೆ, ವಿಷಾಧ ಯಾವುದೂ ಬೇಕಾಗಿಲ್ಲ. ಕೊಲೆ ಮಾಡಿ, ಹಲ್ಲೆ ನಡೆಸಿ ಕ್ಷಮಾಪಣೆ ಕೇಳಿದರೆ ಆಗುತ್ತದೆಯೇ? ಬಿಜೆಪಿ ಮತ್ತು ಜೆಡಿಎಸ್ ಮಹಿಳಾ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆ ಲಾಭ ತಿರಸ್ಕಿರಿಸಲು ಕರೆ ನೀಡಲಿ. ಅವರಿಂದ ಕೇವಲ ಐದು ಜನರ ಕೈಯಲ್ಲಿ ಗ್ಯಾರಂಟಿಗಳನ್ನು ಹಿಂಪಡೆಯುವಂತೆ ಮಾಡಿಸಲು ಆಗುವುದಿಲ್ಲ” ಎಂದರು.

ಬಿಜೆಪಿ ಪ್ರಣಾಳಿಕೆಗೆ ಬೆಲೆ ಇಲ್ಲ:

ಬಿಜೆಪಿ ಪ್ರಣಾಳಿಕೆಗೆ ಮಹತ್ವವೇ ಇಲ್ಲ. ನಾವು ಹಾಗೂ ಜನರು ಕೇಳುವ ಪ್ರಶ್ನೆಗಳಿಗೆ ಪ್ರಧಾನಿ, ಬಿಜೆಪಿ ಅಧ್ಯಕ್ಷ ನಡ್ಡಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಉತ್ತರಿಸಬೇಕು. ಪ್ರಧಾನಿ ಮೋದಿ ಅವರು ಸ್ವಿಸ್ ಬ್ಯಾಂಕ್ ಅಲ್ಲಿ ಇರುವ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ಹಣ ಕೊಡುತ್ತೇವೆ ಎಂದು ಹೇಳಿದರು. ಕೊಟ್ಟ ಮಾತಿನಂತೆಯೇ ನಡೆದುಕೊಂಡಿದ್ದಾರೆಯೇ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮಾಡಿದ್ದಾರೆಯೇ? ಯಾವ ರೈತರ ಆದಾಯ ಡಬಲ್ ಮಾಡಿದ್ದಾರೆ?

ದೇಶದ ಇತಿಹಾಸದಲ್ಲಿಯೇ ಕರಾಳವಾದ ಅಧ್ಯಾಯ ಎಂದರೆ 700 ಜನ ರೈತರು ಪ್ರತಿಭಟನೆಯಲ್ಲಿ ಸತ್ತ ನಂತರ ರೈತ ವಿರೋಧಿ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದು. ಇದೇ ಬಿಜೆಪಿ ಸಾಧನೆ. ಈ ದೇಶದ ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಒಂದೇ ಒಂದು ಉದ್ಯೋಗ ಕೊಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಣಾಳಿಕೆಗೆ ಯಾವ ಮಹತ್ವವಿದೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದು ಕಾಂಗ್ರೆಸ್ ಬದ್ಧತೆ.

ಕೊರೋನಾ ಸಮಯದಲ್ಲಿ 20 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಹಣ ಬಿಡುಗಡೆ ಮಾಡಿದ್ದರೆ ಯಾವ, ಯಾವ ಸಮುದಾಯಕ್ಕೆ, ವರ್ಗಕ್ಕೆ, ಕಾರ್ಮಿಕರಿಗೆ, ರೈತರಿಗೆ ಎಷ್ಟು ಸಹಾಯ ಮಾಡಿದ್ದೇವೆ, ಎಷ್ಟು ಹಣ ಹೋಗಿದೆ ಎಂದು ಬಿಡುಗಡೆ ಮಾಡಿ.

ಡೆತ್ ಸರ್ಟಿಫಿಕೆಟ್ ನಲ್ಲಿ ಮೋದಿ ಫೋಟೊ ಏಕೆ ಹಾಕಲಿಲ್ಲ

ಕೋವಿಡ್ ಸಂದರ್ಭದಲ್ಲಿ ಎಲ್ಲಾ ಸರ್ಟಿಫಿಕೆಟ್ ಗಳಿಗೆ ಮೋದಿ ಅವರ ಫೋಟೊ ಹಾಕಲಾಗಿತ್ತು. ಡೆತ್ ಸರ್ಟಿಫಿಕೆಟ್ ಗೆ ಮಾತ್ರ ಏಕೆ ಮೋದಿ ಫೋಟೊ ಹಾಕಲಿಲ್ಲ. ಬೆಳಗಾವಿಯ ಸಂಸದರಾಗಿದ್ದ ಸುರೇಶ್ ಅಂಗಡಿ ಅವರಂತಹ ಸಜ್ಜನರ ಮೃತದೇಹವನ್ನು ಕ್ಷೇತ್ರದ ಜನರು ನೋಡುವುದಕ್ಕೂ ಬಿಡಲಿಲ್ಲ. ಜೆಸಿಬಿ ಮೂಲಕ ಅವರ ದೇಹವನ್ನು ತಳ್ಳಲಾಯಿತು.

ಕಾಂಗ್ರೆಸ್ ಪಕ್ಷ ಏಕೈಕ ಸಂಸದ ಡಿ.ಕೆ.ಸುರೇಶ್ ಅವರು ಜನರ ಮೃತದೇಹಗಳನ್ನು ಸ್ವತಃ ನಿಂತು ಅತ್ಯಸಂಸ್ಕಾರ ಮಾಡಿದರು. ರೈತರ ತರಕಾರಿ ಖರೀದಿಸಿ ಜನರಿಗೆ ಹಂಚಿದರು. ಮೋದಿಯವರೇ ನಿಮ್ಮ ಸಂಪುಟದ ಸಹದ್ಯೋಗಿಗೆ, ಕ್ಷೇತ್ರದ ಜನರ ಭಾವನೆಗೆ ಬೆಲೆ ಕೊಡದ ನೀವು ದೇಶದ ಜನರ ಭಾವನೆ ಮತು ಬದುಕಿಗೆ ಬೆಲೆ ಕೊಡುತ್ತೀರಾ? ಹುಟ್ಟಿದ ನಂತರ ಎಲ್ಲರೂ ಸಾಯಲೇಬೇಕು. ಆದರೆ ಸಂಸದನಿಗೆ ಗೌರವಯತ ಸಂಸ್ಕಾರ ಸಿಗಲಿಲ್ಲ ಎನ್ನುವುದೇ ನೋವಿನ ಸಂಗತಿ. ಇದರ ಬಗ್ಗೆ ಬಿಜೆಪಿಯವರಾಗಲಿ, ಬೀಗರಾದ ಶೆಟ್ಟರ್ ಅವರಾಗಲಿ ಏಕೆ ಮಾತನಾಡಲಿಲ್ಲ.

ರಾಜೀವ್ ಗಾಂಧಿ ಬೀಗ ತೆಗೆಸದಿದ್ದರೆ ಪೂಜೆ ಮಾಡಲು ಆಗುತ್ತಿತ್ತೇ?
ಬಿಜೆಪಿಯವರು ಮಾತೆತ್ತಿದರೇ ದೇವಸ್ಥಾನ ಎನ್ನುತ್ತಾರೆ. ರಾಜೀವ್ ಗಾಂಧಿ ಅವರು ಬೀಗ ತೆಗೆಸದೇ ಇದ್ದರೆ, ಇವರು ಎಲ್ಲಿ ಪೂಜೆ ಮಾಡುತ್ತಿದ್ದರು? ದೇಶದಲ್ಲಿ ನಿಮ್ಮ ಗಾಳಿ ಎಲ್ಲಿದೆ. ಇರುವುದು ಗ್ಯಾರಂಟಿ ಮತ್ತು ಅಭಿವೃದ್ಧಿಯ ಗಾಳಿ ಮಾತ್ರ. ಎಲ್ಲಾ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ, ತವರುಮನೆಗೆ, ಕೆಲಸಕ್ಕೆ ಹೋಗುತ್ತಿದ್ದಾರೆ. ಇದರ ವಿರುದ್ಧ ಅವರ ದೋಸ್ತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಬಿಜೆಪಿಯವರು ಒಂದೇ ಒಂದು ಮನೆ ಕಟ್ಟಿದ್ದರೇ ಹೇಳಿ
ಮೊದಲು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೇ ಇದ್ದವರು ಈಗ ಹೊಸ ಭರವಸೆ ಹೇಗೆ ಈಡೇರಿಸುವಿರಿ? ಮನೆ ಕಟ್ಟಿದ್ದೇನೆ ಎಂದು ಹೇಳುತ್ತೀರಿ. 10 ವರ್ಷದಲ್ಲಿ ಎಷ್ಟು ಮನೆ ಕಟ್ಟಿದ್ದೀರಿ ಪಟ್ಟಿ ಬಿಡುಗಡೆ ಮಾಡಿ. ನಮ್ಮ ಕಾಂಗ್ರೆಸ್ ಎಂಎಲ್ಎ ಗಳ ಕ್ಷೇತ್ರಗಳಿಗಂತೂ ಹಣ ಬಂದಿಲ್ಲ. ಅಥವಾ ಬಿಜೆಪಿ ಮಂತ್ರಿಗಳು ಮನೆಗಳನ್ನು ಕಟ್ಟಿದ್ದರೇ ತಿಳಿಸಿ?

ಇಂತಹ ಬರಗಾಲದಲ್ಲೂ ಕುಡಿಯುವ ನೀರಿಗೆ ತೊಂದರೆ ಇಲ್ಲದೇ ಸರಬರಾಜು ಮಾಡುತ್ತಿದ್ದೇವೆ. ಕುಡಿಯುವ ನೀರಿಗೆ ಬಿಜೆಪಿಯವರು ಒಂದೇ ಒಂದು ರೂಪಾಯಿ ಕೊಟ್ಟಿದ್ದಾರೆಯೇ? ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಣೆ ಮಾಡಿ ಹಣ ಕೊಟಿಲ್ಲ, ಮಹದಾಯಿ ಯೋಜನೆ ಕುರಿತು ಸಂಭ್ರಮಾಚರಣೆ ಮಾಡಲಾಯಿತು, ಆ ನಂತರ ಏಕೆ ಯೋಜನೆ ಮುಂದುವರೆಯಲಿಲ್ಲ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಮುಂದಕ್ಕೆ ನಿಮ್ಮ ಅಧಿಕಾರ ಇರುವುದಿಲ್ಲ ಹೋಗುತ್ತದೆ.

ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಿಲ್ಲ

ಬಿಜೆಪಿ ನಡೆಸಿದ ಸಮೀಕ್ಷೆಯಲ್ಲೇ ಬಿಜೆಪಿ ಗೆಲ್ಲುವುದಿಲ್ಲ ಎಂದು ವರದಿ ಬಂದಿದೆ. ಬಿಜೆಪಿ ಸಂಸದರು ಉತ್ತಮವಾಗಿ ಕೆಲಸ ಮಾಡಿದ್ದರೆ 14 ಜನ ಅಭ್ಯರ್ಥಿಗಳನ್ನು ಬದಲಿಸಿದ್ದೇಕೆ? ಸದಾನಂದ ಗೌಡ, ಪ್ರತಾಪ್ ಸಿಂಹ, ಕರಡಿ ಸಂಗಣ್ಣ, ಶ್ರೀನಿವಾಸ್ ಪ್ರಸಾದ್, ಕಟೀಲ್ ಅವರಿಗೆ ಏಕೆ ಕೊಡಲಿಲ್ಲ? ಶೋಭಕ್ಕ ಅವರಿಗೆ ಗೋ ಬ್ಯಾಕ್ ಎಂದು ಏಕೆ ಕಳುಹಿಸಲಾಯಿತು?

ಕುರುಬರಿಗೆ, ಅಲ್ಪಸಂಖ್ಯಾತರಿಗೆ ಒಂದೇ ಒಂದು ಸ್ಥಾನ ಕೊಟ್ಟಿಲ್ಲ. ಇದು ಸಾಮಾಜಿಕ ನ್ಯಾಯವೇ? ಇದರ ಅರ್ಥ ನಿಮ್ಮ ಸೋಲು ನಿಮಗೆ ಅರ್ಥವಾಗಿದೆ. “ಕಳೆದ ಒಂದು ವರ್ಷದ ಹಿಂದೆ ಮೈಸೂರಿನ ಅದೇ ಮೈದಾನದಲ್ಲಿ ದೇಶದ ಪ್ರಧಾನಿ ತಂದೆ, ಮಗನ ಬಗ್ಗೆ ಏನು ಮಾತನಾಡಿದರು. ಗೌಡ್ರು ಏನು ಮಾತನಾಡಿದರು, ಬಿಜೆಪಿಯವರು ಏನು ಮಾತನಾಡಿದರು. ಅಮಿತ್ ಶಾ ವಿರುದ್ಧ ಏನೂ ಮಾತನಾಡಿದರು ಎಂದು ಮಾಧ್ಯಮದವರು ಜನರಿಗೆ ತೋರಿಸಬೇಕು”.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಜೆಡಿಎಸ್ ಗೆ ಬೆಂಬಲ ನೀಡಿದ್ದೆವು. ನಾನು ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ಬಯಸಿದ್ದು ನಿಜ. ಅವರಿಂದ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಯಾರು ಅವರ ಸರ್ಕಾರವನ್ನು ಕೆಡವಿದರೋ ಅವರ ಜೊತೆಯೇ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ.

ಪ್ರಶ್ನೋತ್ತರಗಳು

ಸಂಜಯ್ ಪಾಟೀಲ್ ಅವರ ಅವಹೇಳನ ಹೇಳಿಕೆ ಬಗ್ಗೆ ಕೇಳಿದಾಗ “ಸಂಜಯ್ ಪಾಟೀಲ್ ಅವರಂತಹ ನೂರಾರು ಜನರನ್ನ ಅರಗಿಸಿಕೊಳ್ಳುವ ಶಕ್ತಿ ನಮ್ಮ ಸಚಿವರಿಗಿದೆ. ಇದಕ್ಕೆಲ್ಲ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ” ಎಂದರು.

ಭ್ರಷ್ಟಾಚಾರದಿಂದ ಕರ್ನಾಟಕದ ಖಜಾನೆ ಖಾಲಿಯಾಗಿದೆ ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದಾರೆ ಎಂದಾಗ “ಹಾಗಾದರೆ ನೀವುಗಳು ಯಾರೂ ಊಟ ಮಾಡುತ್ತಿಲ್ಲವೇ? ರಸ್ತೆ, ವಿದ್ಯುತ್ ಏನೂ ಇಲ್ಲವೇ?” ಎಂದರು.

ಕಾಂಗ್ರೆಸ್ ಪಕ್ಷದವರು ಭಾರತ್ ಮಾತಾಕೀ ಜೈ ಎನ್ನಲು ಹೈಕಮಾಂಡ್ ಅನುಮತಿ ಕೇಳಬೇಕು ಎಂದಾಗ “ನಾವು ದೇಶ ಕಟ್ಟಿದವರು. ನಾವು ಭಾರತದ ಸ್ವಾತಂತ್ರ್ಯ ಹೋರಾದಲ್ಲಿ ಇದ್ದವರು. ಬಿಜೆಪಿಯವರು ಎಲ್ಲಿದ್ದರು. ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡಿನಲ್ಲಿ ಎಲ್ಲರೂ ಒಂದು ಎನ್ನುವ ಸಂದೇಶವಿದೆ. ನಾವು ಸಂವಿಧಾನವನ್ನು ಗೌರವಿಸುವವರು.” ಎಂದರು.

ಧಾರವಾಡದಲ್ಲಿ ಅಭ್ಯರ್ಥಿ ಬದಲಾವಣೆ ಕೇಳಿದಾಗ “ಅಭ್ಯರ್ಥಿ ಬದಲಾಯಿಸುವ ಪ್ರಮೇಯವೇ ಇಲ್ಲ. ಅವರು ಮುಂಚಿತವಾಗಿ ಬಂದಿದ್ದರೇ ಯೋಚಿಸಬಹುದಿತ್ತು” ಎಂದು ತಿಳಿಸಿದರು.

More News

You cannot copy content of this page