ಬೆಂಗಳೂರು: ರಾಜ್ಯಕ್ಕೆ ಇಂದು ಎಂಟ್ರಿ ಕೊಡಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಎಂಟ್ರಿ ನೀಡುತ್ತಿರುವ ರಾಹುಲ್ ಗಾಂಧಿ, ಮಂಡ್ಯ ಮತ್ತು ಕೋಲಾರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಮಂಡ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಹಾಗೂ ಕೋಲಾರದ ಅಭ್ಯರ್ಥಿ ಗೌತಮ್ ಪರ ಮತ ಭೇಟೆ ನಡೆಸಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಪರ ಮತಯಾಚನೆ ಮಾಡಲಿದ್ದಾರೆ. ರಾಹುಲ್ ಅವರಿಗೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ರಾಜ್ಯ ನಾಯಕರು ಸಾಥ್ ನೀಡಲಿದ್ದಾರೆ.
ಮಧ್ಯಾಹ್ನ 1ಯ30 ಕ್ಕೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್, ನಂತರ ಹೆಲಿಕಾಪ್ಟರ್ ಮೂಲಕ ಮಂಡ್ಯದ ಕಡೆ ಪ್ರಯಾಣ ಬೆಳೆಸಲಿದ್ದಾರೆ. ಮಂಡ್ಯದಲ್ಲಿ ಮಧ್ಯಾಹ್ನ 2 ರಿಂದ 3ಗಂಟೆ ವರೆಗೆ ಸಮಾವೇಶದಲ್ಲಿ ಭಾಗಿಯಾಗಲಿರುವ ರಾಹುಲ್ ಗಾಂಧಿ, ಮಧ್ಯಾಹ್ನ 3.10ಕ್ಕೆ ಮಂಡ್ಯದಿಂದ ಕೋಲಾರಕ್ಕೆ ಪ್ರಯಾಣಬೆಳೆಸಲಿದ್ದಾರೆ.
ಸಂಜೆ 4 ಗಂಟೆಗೆ ಕೋಲಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅವರು, ಸಂಜೆ 5ಕ್ಕೆ ಕೋಲಾರದಿಂದ ಬೆಂಗಳೂರಿಗೆ ಪ್ರಯಾಣಿಸಿ, ಬಳಿಕ ಹೆಚ್ಎಎಲ್ ನಿಂದ ದೆಹಲಿಗೆ ರಾಹುಲ್ ಪ್ರಯಾಣಿಸಲಿದ್ದಾರೆ.