HD KUMARASWAMY: ಕರ್ನಾಟಕದಲ್ಲಿ ಮೊದಲು 2.75 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿ: ಕುಮಾರಸ್ವಾಮಿ ಸವಾಲು

ಶಿವಮೊಗ್ಗ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ (ಎನ್‍ಡಿಎ) ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಬಿ.ವೈ.ರಾಘವೇಂದ್ರ ಅವರು 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಇಂದು ನಡೆದ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು. ಮನೆಮನೆಗೆ ತೆರಳಿ ಮೋದಿಜೀ ಅವರ ಜನಪರ ಯೋಜನೆಗಳನ್ನು ತಿಳಿಸಿ. ರಾಘವೇಂದ್ರರನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಎರಡು ರೈತ ಶಕ್ತಿಗಳು ರಾಜ್ಯದಲ್ಲಿ ಒಂದಾಗಿವೆ. ಹಣದ ಶಕ್ತಿ ಇದರ ಮುಂದೆ ಏನೂ ಅಲ್ಲ. ಕಾಂಗ್ರೆಸ್ಸಿನವರು ಹೊಸ ಗ್ಯಾರಂಟಿ ತಂದಿದ್ದಾರೆ. ಆದರೆ, ಅವರು ಆಡಳಿತ ಮಾಡಲು ಬೇಕಾದಷ್ಟು ಸ್ಥಾನಕ್ಕೆ ಸ್ಪರ್ಧಿಸಿಲ್ಲ. 35 ಅಂಕಕ್ಕೆ ಬೇಕಾದಷ್ಟು ಪ್ರಶ್ನೆ ಬಿಡಿಸದ ಕಾಂಗ್ರೆಸ್ ಪಕ್ಷ ಪಾಸಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಫೇಲಾಗುವ, ಮೋಸ ಮಾಡುವ ಪಕ್ಷ ಎಂದು ಟೀಕಿಸಿದರು. ಕೋವಿಡ್ ಸಂದರ್ಭದಲ್ಲಿ 130 ಕೋಟಿ ಜನರ ಜೀವ ಉಳಿಸಿದ ಮೋದಿಜೀ ಅವರಿಗೆ ಕೃತಜ್ಞತೆ ಸಲ್ಲಿಸಲು ಅವರಿಗೆ ಮತ ಕೊಡಿ ಎಂದು ಮನವಿ ಮಾಡಿದರು.
ಪಿಕ್ ಪಾಕೇಟ್ ಸರ್ಕಾರ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಇದು ರೈತವಿರೋಧಿ ಸರಕಾರ. ಈ ಸರಕಾರ ಪಿಕ್ ಪಾಕೆಟ್ ಸರಕಾರ ಎಂದು ಟೀಕಿಸಿದರು. ಕರ್ನಾಟಕದಲ್ಲಿ ಮೊದಲು 2.75 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸವಾಲೆಸೆದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ಆರಂಭಿಸಿದ್ದ 4 ಸಾವಿರ ನೀಡುವುದನ್ನು ಈ ಸರಕಾರ ರದ್ದು ಮಾಡಿದೆ ಎಂದು ಆಕ್ಷೇಪಿಸಿದರು.

ಬಿಲದಲ್ಲಿದ್ದವರು ಹೊರಗೆ ಬಂದಿದ್ದಾರೆ
ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಬಿಜೆಪಿ ಸದಾ ರಾಷ್ಟ್ರಹಿತ, ಹಿಂದುತ್ವಕ್ಕೆ ಬದ್ಧವಾದ ಪಕ್ಷ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಬಿಲದಲ್ಲಿದ್ದವರೆಲ್ಲರೂ ಹೊರಕ್ಕೆ ಬಂದಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗುತ್ತಾರೆ. ಹನುಮಾನ್ ಚಾಲೀಸ ಹಾಕಿದ್ದಕ್ಕೆ ಅಂಗಡಿಗೆ ಬಂದು ಹೊಡೆದಿದ್ದಾರೆ. ನಿನ್ನೆ ರಾಮನವಮಿ ದಿನ ಜೈ ಶ್ರೀರಾಂ ಎಂದುದಕ್ಕೆ ಹಲ್ಲೆ ಮಾಡಿ ಇನ್ಯಾವುದೋ ಘೋಷಣೆ ಕೂಗಲು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇವರೆಲ್ಲ ಕೊಬ್ಬಿದ್ದಾರೆ ಎಂದು ಟೀಕಿಸಿದರು. ಜನತೆ ಕಾಂಗ್ರೆಸ್ಸಿನ ಕೊಬ್ಬಿಳಿಸುವ ಕೆಲಸ ಮಾಡಲಿದ್ದಾರೆ ಎಂದು ನುಡಿದರು.
ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಪತ್ರಕರ್ತರ ಜೊತೆ ಮಾತನಾಡಿ, ಅಭಿವೃದ್ಧಿಯನ್ನು ಮುಂದಿಟ್ಟು ಚುನಾವಣೆ ಎದುರಿಸಲಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗೆಂದು ಆ ಪಕ್ಷದ ಮುಖಂಡರೂ ಅರಿತಿದ್ದು, ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಸಾಗರೋಪಾದಿಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.

More News

You cannot copy content of this page