ನವದೆಹಲಿ: ದೇಶದ ರಾಜಧಾನಿ ನವದೆಹಲಿಯ ಬಹುತೇಕ ಶಾಲೆಗಳಿಗೆ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಐವತ್ತಕ್ಕೂ ಹೆಚ್ಚು ಶಾಲೆಗಳಿಗೆ ಈ ರೀತಿ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ದೆಹಲಿಯ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಮಾತ್ರ ಈ ರೀತಿಯ ಬೆದರಿಕೆ ಸಂದೇಶ ಬಂದಿದೆ ಎಂಬುದು ಗಮನಾರ್ಹ ವಿಷಯ. ವಿಷಯ ತಿಳಿಯುತ್ತಿದ್ದಂತೆ ರಾಜಧಾನಿ ದೆಹಲಿಯಲ್ಲಿ ಅಲರ್ಟ್ ಘೋಷಿಸಲಾಗಿದೆ.
ಎಲ್ಲ ಶಾಲೆಗಳಲ್ಲಿ ಸಮಗ್ರ ತಪಾಸಣೆ ನಡೆಸಲಾಗಿದೆ. ಬಾಂಬ್ ಶೋಧ ದಳ, ಅಗ್ನಿ ಶಾಮಕ ದಳ, ಪೊಲೀಸರ ತಪಾಸಣೆಗೆ ನೆರವು ನೀಡಿದೆ. ಇದುವರೆಗೆ ಯಾವುದೇ ಸಂಶಾಯಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಗೃಹ ಇಲಾಖೆ ಮತ್ತು ದೆಹಲಿ ಲೆಫ್ಟಿನೆಂಟ್ ಜನರಲ್ ಪ್ರಕರಣ ಸಂಬಂಧ ತುರ್ತು ಸಭೆ ನಡೆಸಿದೆ. ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಇಂತಹ ಘಟನೆಗಳು ಈ ಹಿಂದೆ ಕೂಡ ಸಂಭವಿಸಿತ್ತು. ಇದು ದುಷ್ಕರ್ಮಿಗಳ ಸಂಚು. ಪೋಷಕರು ಗಾಬರಿಯಾಗಬೇಕಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೂಡ ಕೆಲವು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಅಂತಿಮವಾಗಿ ವಿದ್ಯಾರ್ಥಿಯೊಬ್ಬ ಈ ರೀತಿಯ ಸಂದೇಶ ಕಳುಹಿಸಿದ್ದು ಪತ್ತೆಯಾಗಿತ್ತು.
ತಮಿಳುನಾಡಿನ ಚೆನ್ನೈ ನಗರದಲ್ಲಿ ಕಳೆದ ವಾರ ಕೂಡ ಇದೇ ರೀತಿಯ ಘಟನೆ ವರದಿಯಾಗಿತ್ತು. ಅಂತಿಮವಾಗಿ ಇದು ಹುಸಿ ಕರೆ ಎಂಬುದು ಸಾಬೀತಾಗಿತ್ತು
ಇದೀಗ ದೆಹಲಿಯಲ್ಲಿ ಕೂಡ ಸಮಗ್ರ ತಪಾಸಣೆ ಬಳಿಕ ಬಾಂಬ್ ಬೆದರಿಕೆ ಹುಸಿ ಕರೆ ಎಂಬುದು ಸಾಬೀತಾಗಿದೆ. ಆದರೂ ಶಾಲೆಗಳಲ್ಲಿ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ