DK SURESH ON PRAJWAL REVANNA CASE: ಪೆನ್ ಡ್ರೈವ್ ಪ್ರಕರಣದಿಂದ ನುಣುಚಿಕೊಳ್ಳಲು ಬಿಜೆಪಿ, ಜೆಡಿಎಸ್ ನಾಯಕರಿಂದ ಶಿವಕುಮಾರ್ ಅವರ ವಿರುದ್ಧ ಅನಗತ್ಯ ಆರೋಪ: ಡಿ.ಕೆ. ಸುರೇಶ್

ಬೆಂಗಳೂರು, ಮೇ 1: “ಪೆನ್ ಡ್ರೈವ್ ವಿಚಾರ ಎಲ್ಲರಿಗಿಂತ ಮುಂಚಿತವಾಗಿ ಗೊತ್ತಿದ್ದೇ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ. ಈ ಪ್ರಕರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯಿಸಿದರು.

ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಬಹಿರಂಗಗೊಳಿಸಿರುವುದು ಮಹಾನ್ ನಾಯಕ ಡಿ.ಕೆ. ಶಿವಕುಮಾರ್ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;

“ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶಿವಕುಮಾರ್ ಅವರನ್ನು ಸ್ಮರಿಸದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ನಿದ್ದೆ ಬರುವುದಿಲ್ಲ. ನಾವು ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿದ್ದರೆ ಚುನಾವಣೆಗೆ ವಾರ ಅಥವಾ ಹತ್ತು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡಬಹುದಾಗಿತ್ತಲ್ಲವೇ. ಈ ವಿಚಾರದಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಗೊತ್ತಿದ್ದು ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ. ಕಾಂಗ್ರೆಸ್ ಮೇಲೆ ಆರೋಪ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇಲ್ಲಿ ಕುಮಾರಸ್ವಾಮಿ ಅವರ ಆರೋಪ ಮುಖ್ಯವೋ, ಆ ಭಾಗದ ಐನೂರಕ್ಕಿಂತ ಹೆಚ್ಚು ಸಂತ್ರಸ್ತೆಯರ ರಕ್ಷಣೆ ನ್ಯಾಯ ಒದಗಿಸುವುದು ಮುಖ್ಯವೋ? ಅವರು ತಮ್ಮ ಹುಳುಕು ಮುಚ್ಚಿಕೊಳ್ಳಲು ದಿನಾ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ನಾವು ಚಿಂತನೆ ಮಾಡಬೇಕು. ಕುಮಾರಸ್ವಾಮಿ ಅವರು ಯಾವ ವಿಚಾರದಲ್ಲಿ ಶಿವಕುಮಾರ್ ಅವರ ವಿರುದ್ಧ ಟೀಕೆ ಮಾಡದೇ ಇದ್ದಾರೆ? ಎಲ್ಲಿ ಏನೇ ಆದರೂ ಅದಕ್ಕೆ ಶಿವಕುಮಾರ್ ಕಾರಣ ಎನ್ನುತ್ತಾರೆ. ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡದೇ ಇರಲು ಅವರಿಗೆ ಆಗುವುದಿಲ್ಲ” ಎಂದರು.

ನಿಮ್ಮ ವಿರುದ್ಧ ಯಾವ ಜಿದ್ದು ಸಾಧಿಸುತ್ತಿದ್ದಾರೆ ಎಂದು ಕೇಳಿದಾಗ, “ಯಾವ ಜಿದ್ದೋ ಗೊತ್ತಿಲ್ಲ. ವರದ್ದು ಮಾಜಿ ಪ್ರಧಾನಮಂತ್ರಿಗಳ ದೊಡ್ಡ ಕುಟುಂಬವಲ್ಲವೇ? ಅವರ ಕುಟುಂಬದ ಬಗ್ಗೆ ನಮಗೇನು ಗೊತ್ತು” ಎಂದರು.

ದೇವರಾಜೇಗೌಡ ಪದೇ ಪದೆ ಡಿ.ಕೆ. ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡುತ್ತಿರುವುದೇಕೆ ಎಂದು ಕೇಳಿದಾಗ, “ಅವರವರು ತಮ್ಮ ಉಳಿವಿಗಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಶಿವಕುಮಾರ್ ಅವರ ಬಳಿ ಪೆನ್ ಡ್ರೈವ್ ಇದ್ದಿದ್ದರೆ ಇನ್ನು ಮುಂಚಿತವಾಗಿ ರಿಲೀಸ್ ಮಾಡಬಹುದಿತ್ತಲ್ಲವೇ? ಇದು ಬಿಡುಗಡೆ ಆಗಿರುವುದು ಹಾಸನ ಜಿಲ್ಲೆಯಲ್ಲಿ, ಹಾಸನ ಜಿಲ್ಲೆಯ ನಾಯಕರ ಕೈವಾಡ ಇದರಲ್ಲಿದೆ. ಅವರ ಮೈತ್ರಿ ನಾಯಕರು ಹಾಗೂ ಕುಮಾರಸ್ವಾಮಿ ಅವರ ಕೈವಾಡವಿದೆ. ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಮುಂಚಿತವಾಗಿಯೇ ಗೊತ್ತಿತ್ತು, ಹೀಗಾಗಿ ಬಹಿರಂಗವಾಗಿ ಪ್ರಜ್ವಲ್ ಗೆ ತಿದ್ದುಕೊಳ್ಳುವಂತೆ ಹೇಳುತ್ತೇನೆ ಎಂದು ಹೇಳಿದ್ದರಲ್ಲ. ಇನ್ನು ಈ ವಿಡಿಯೋಗಳು ನಾಲ್ಕು ವರ್ಷಗಳ ಹಳೆಯದು ಎಂದು ರೇವಣ್ಣನವರೇ ಒಪ್ಪಿಕೊಂಡಿದ್ದಾರೆ. ಅವರ ಕುಟುಂಬದವರೇ ಈ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದು, ಬೇರೆಯವರ ಮೇಲೆ ಯಾಕೆ ಆರೋಪ ಮಾಡಬೇಕು” ಎಂದರು.

ನನ್ನ ಬಳಿ ಪೆನ್ ಡ್ರೈವ್ ಬರುವ ಮುನ್ನ ಡಿ.ಕೆ. ಶಿವಕುಮಾರ್ ಅವರ ಬಳಿ ಈ ಪೆನ್ ಡ್ರೈವ್ ಹೋಗಿತ್ತು ಎಂಬ ದೇವರಾಜೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಸನ ಜಿಲ್ಲೆಯಲ್ಲಿ ಕೇವಲ ಗುಸು ಗುಸು ಸುದ್ದಿ ಇತ್ತು. ಅವರು ಕೋರ್ಟ್ ನಲ್ಲಿ ತಡೆಯಾಜ್ಞೆ ಕೂಡ ತಂದಿದ್ದರು. ಪೆನ್ ಡ್ರೈವ್ ಹರಿದಾಡಿದ ನಂತರ ಈಗ ವಿಚಾರ ಚರ್ಚೆಯಾಗುತ್ತಿದೆ” ಎಂದರು.

ಪ್ರಕರಣದ ಪಾರದರ್ಶಕ ತನಿಖೆ ಬಗ್ಗೆ ಕೇಳಿದಾಗ, “ಅದು ಸರ್ಕಾರದ ಕೆಲಸ. ಈಗಾಗಲೇ ಎಸ್ಐಟಿ ತನಿಖೆ ಆದೇಶಿಸಲಾಗಿದೆ. ಇದರಲ್ಲಿ ನಮ್ಮ ಮಾತೇನಿದೆ. ಅಲ್ಲಿರುವ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎನ್ನುವುದಷ್ಟೇ ನನ್ನ ಒತ್ತಾಯ” ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಕೇಳಿದಾಗ, “ಅದು ಅವರ ಕುಟುಂಬದ ಪಕ್ಷ. ಅಲ್ಲಿ ಯಾವಾಗಬೇಕಾದರೂ ಅಮಾನತು ಮಾಡುತ್ತಾರೆ, ಯಾವಾಗ ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಜನತಾ ದಳ ದೇವೇಗೌಡ ಕುಟುಂಬದ ಆಸ್ತಿ” ಎಂದರು.

ಜ.27ರಂದು ಸೂರಜ್ ರೇವಣ್ಣ ಅವರು ಈ ವಿಚಾರಕ್ಕೆ ಭೋಟಿಯಾಗಿದ್ದರು ಎಂಬ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, “ಅನವಶ್ಯಕವಾಗಿ ಈ ರೀತಿ ಚರ್ಚೆ ತಪ್ಪು. ಬೇರೆ ಕೆಲಸ ಕಾರ್ಯಗಳ ವಿಚಾರವಾಗಿ ಸೂರಜ್ ರೇವಣ್ಣ, ಶಿವಕುಮಾರ್ ಅವರನ್ನು ಭೇಟಿ ಮಾಡಿರಬಹುದು” ಎಂದರು.

ಸಂತ್ರಸ್ತೆ ದೂರು ಕೊಟ್ಟರೆ ಶಾಸಕರ ವಿರುದ್ಧ ಕಾನೂನು ಕ್ರಮ:

ರಾಮನಗರ ಶಾಸಕರಿಗೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ, “ಮಾಡಲಿ ಸಂತೋಷ. ಸಂತ್ರಸ್ತೆ ದೂರು ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ” ಎಂದು ತಿಳಿಸಿದರು.

ನಿಮ್ಮ ಆಪ್ತರು ಎಂದು ವಿಡಿಯೋ ವೈರಲ್ ಮಾಡಿದ್ದಾರಾ ಎಂದು ಕೇಳಿದಾಗ, “ಅಂತಹ ನೂರೆಂಟು ಇವೆ. ಬಾಂಬೆ ಬ್ಲೂ ಬಾಯ್ಸ್ ಗಳದ್ದು ಆಯ್ತು, ಯೋಗೇಶ್ವರ್ ಅವರು ಎಳ್ಲಾ ಮಠಗಳ ಪ್ರವಾಸ ಮಾಡಿದ್ದು ಆಯ್ತಾ? ಮಠದವರು ನಿಮ್ಮ ಬಳಿ ಖಾಸಗಿಯಾಗಿ ಮಾತಾಡಿರಬೇಕಲ್ಲವೇ? ಅಮಿತ್ ಶಾ ಬಳಿ ಹೋಗಿ ಕೊಟ್ಟಿದ್ದಾಯ್ತು. ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಬದಲಾವಣೆಯಾಗಲು ಕಾರಣವೇನು? ಅದನ್ನು ಯೋಗೇಶ್ವರ್ ಅವರೇ ಹೇಳಿದ್ದಾರೆ. ಹೀಗಾಗಿ ಒಬ್ಬೊಬ್ಬರದ್ದು ಒಂದೊಂದು ಇರುತ್ತದೆ” ಎಂದು ತಿಳಿಸಿದರು.

ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ಎಷ್ಟು ಮುಖ್ಯವೋ ವಿಡಿಯೋ ಬಿಡುಗಡೆ ಮಾಡಿದವರಿಗೆ ಶಿಕ್ಷೆಯಾಗುವುದು ಅಷ್ಟೇ ಮುಖ್ಯವಲ್ಲವೇ ಎಂದು ಕೇಳಿದಾಗ, “ಯಾರೆಲ್ಲಾ ಕಾನೂನು ಚೌಕಟ್ಟಿನಲ್ಲಿ ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇದು ಒಬ್ಬರ ವಿಚಾರವಲ್ಲ. ನೂಲಿನಂತೆ ಸೀರೆ ಎಂದು ಯಾರೋ ವ್ಯಾಖ್ಯಾನ ಮಾಡುತ್ತಿದ್ದರು. ಮೇಲಿನಿಂದಲೂ ಇದೇ ರೀತಿ ಇದೆಯಂತೆ. ಹಾಸನದಲ್ಲಿ ಹೋಗಿ ಒಂದು ರೌಂಡ್ ಹಾಕಿ. ಎಲ್ಲೆಲ್ಲಿ ಏನು ಚರ್ಚೆಯಾಗುತ್ತಿದೆ ಗೊತ್ತಾಗುತ್ತದೆ” ಎಂದರು.

ಪ್ರಕರಣದಲ್ಲಿ ರೇವಣ್ಣ ಅವರನ್ನು ಎ1 ಮಾಡಿರುವುದಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕೇಳಿದಾಗ, “ದೂರಿನಲ್ಲಿ ಏನಿದೆ ಎಂಬ ಮಾಹಿತಿ ನನಗಿಲ್ಲ. ನಾನು ಮಾಧ್ಯಮಗಳ ಮೂಲಕ ವಿಚಾರ ತಿಳಿದಿದೆ. ಸಂತ್ರಸ್ತೆ ದೂರಿನ ಆಧಾರದ ಮೇಲೆ ಎ1 ಮಾಡಿರುತ್ತಾರೆ. ಇದರಲ್ಲಿ ಯಾವುದೇ ರೀಜಕೀಯ ಬಣ್ಣವಿಲ್ಲ” ಎಂದರು.

ಎಸ್ಐಟಿ ಬಳಿಕ ರಾಮನಗರ ಶಾಸಕರ ವಿಡಿಯೋ ಲೀಕ್ ಹಾಗೂ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ತಮ್ಮ ವಿಡಿಯೋ ಬಯಲಾಗದಂತೆ ತಡೆಯಾಜ್ಞೆ ಕೋರಿದ್ದು, ಇಂತಹ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಎಸ್ಐಟಿ ಮೂಲಕ ತನಿಖೆ ಮಾಡುವುದು ಉತ್ತಮವಲ್ಲವೇ ಎಂದು ಕೇಳಿದಾಗ, “ಇದಕ್ಕೆ ವಿಶೇಷವಾದ ಕಾನೂನು ತರಬೇಕು. ಈ ರೀತಿ ಬೆದರಿಸುವುದು, ಖಆಸಗಿ ಬದುಕಿಗೆ ಧಕ್ಕೆಯಾಗುವುದು, ಅಧಿಕಾರ ದುರ್ಬಳಕೆ ತಡೆಯಲು ಪ್ರತ್ಯೇಕ ಕಾನೂನು ತರಬೇಕು”

ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲವೇ ಎಂದು ಕೇಳಿದಾಗ, “ಹೋಗಬೇಕಾಗಿತ್ತು. ನನ್ನ ಗಂಟಲು ಸರಿ ಇಲ್ಲ, ಔಷಧಿ ತೆಗೆದುಕೊಳ್ಳುತ್ತಿದ್ದೇನೆ” ಎಂದರು.

More News

You cannot copy content of this page