ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಾಸನದ ಪೆನ್ ಡ್ರೈವ್ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ದೇವೇಗೌಡ ಕುಟುಂಬ ವರ್ಸಸ್ ಡಿ ಕೆ ಶಿವಕುಮಾರ್ ಕುಟುಂಬದ ನಡುವಿನ ರಾಜಕೀಯ ಜಿದ್ದಾಜಿದ್ದಿ ಎಂಬಂತೆ ಕಂಡು ಬರುತ್ತಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಶೇಷ ತನಿಖಾ ದಳ ರಚಿಸಿದೆ. ಈ ತನಿಖಾ ಸಂಸ್ಥೆಗೆ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿ ತನಿಖೆಗೆ ಹಸಿರು ನಿಶಾನೆ ತೋರಿಸಿದೆ.
ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ ಡಿ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಸದ್ಯ ವಿದೇಶದಲ್ಲಿದ್ದರೆ, ತಂದೆ ಹೆಚ್ ಡಿ ರೇವಣ್ಣ ನಾಳೆ ವಿಶೇಷ ತನಿಖಾ ದಳದ ಮುಂದೆ ಹಾಜರಾಗುವ ಸಾಧ್ಯತೆ ಇದೆ
ಮನೆಯಲ್ಲಿ ಹೋಮ ಹವನ

ಇಂದು ಹೊಳೆನರಸೀಪುರದಿಂದ ಬೆಂಗಳೂರಿಗೆ ತೆರಳುವ ಮುನ್ನ ಹೆಚ್ ಡಿ ರೇವಣ್ಣ ತಮ್ಮ ನಿವಾಸದಲ್ಲಿ ಹೋಮ ಹವನ ನಡೆಸಿದ್ದಾರೆ. ಪ್ರಸಕ್ತ ಸಮಸ್ಯೆಯಿಂದ ಪಾರಾಗಲು ರೇವಣ್ಣ ದೈವದ ಮೊರೆ ಹೋಗಿದ್ದಾರೆ. ಎಲ್ಲ ಸವಾಲನ್ನು ಎದುರಿಸುತ್ತೇನೆ. ಓಡಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ರೇವಣ್ಣ ಗುಡುಗಿದ್ದಾರೆ.
ಪತ್ನಿ ಭವಾನಿ ಜೊತೆ ಪ್ರತ್ಯೇಕ ಕಾರುಗಳಲ್ಲಿ ರೇವಣ್ಣ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ತಂದೆ ಹೆಚ್ ಡಿ ದೇವೇಗೌಡರ ಜೊತೆ ರೇವಣ್ಣ ಈಗಾಗಲೇ ಮಾತುಕತೆ ನಡೆಸಿದ್ದಾರೆ. ರೇವಣ್ಣ ಜೋತಿಷ್ಯವನ್ನು ಅತೀ ಹೆಚ್ಚು ನಂಬುತ್ತಿರುವ ವ್ಯಕ್ತಿಯಾಗಿದ್ದಾರೆ.
ಇದೀಗ ದೈವದ ಮೇಲೆ ಭಾರಹಾಕಿ ರೇವಣ್ಣ ಬೆಂಗಳೂರಿಗೆ ಬಂದಿದ್ದಾರೆ
ಡಿಕೆಶಿಗೆ ಡಿಕೆ ಸುರೇಶ್ ಬೆಂಬಲ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಾಗ್ದಾಳಿಗೆ ತುತ್ತಾಗಿರುವ ಡಿಕೆ ಶಿವಕಮಾರ್‌ಗೆ ಸಹೋದರ ಡಿಕೆ ಸುರೇಶ್ ಬೆಂಬಲ ಸೂಚಿಸಿದ್ದಾರೆ. ಕುಮಾರಸ್ವಾಮಿ ಮಂಗಳವಾರ ಮಹಾ ನಾಯಕನ ಕೈವಾಡದ ಬಗ್ಗೆ ಆರೋಪಿಸಿದ್ದರು. ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದೀಗ ಸಹೋದರನ ಬೆಂಬಲಕ್ಕೆ ನಿಂತಿರುವ ಡಿಕೆ ಸುರೇಶ್, ಶಿವಕುಮಾರ್ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಶಿವಕುಮಾರ್ ವಿರುದ್ಧ ಮಾತನಾಡದಿದ್ದರೆ ಜೆಡಿಎಸ್ ನಾಯಕರಿಗೆ ತಿಂದ ಅನ್ನ ಕರಗದು ಎಂದು ಲೇವಡಿ ಮಾಡಿದ್ದಾರೆ.
ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾದ ಕುರಿತು ಗೃಹ ಸಚಿವ ಪರಮೇಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವೀಸಾ ನೀಡಿಕೆ ಯಾರ ಕೈಯಲ್ಲಿ ಇದೆ ಎಂದು ಸಚಿವ ಜೋಶಿ ಆರೋಪಕ್ಕೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ
ರಾಜ್ಯದಲ್ಲಿ ಸದ್ಯ ಪೆನ್ ಡ್ರೈವ್ ರಾಜಕೀಯ ಭಾರೀ ಸದ್ದು ಮಾಡುತ್ತಿದೆ ಮುಂದಿನ ಕೆಲವು ದಿನ ಇದು ರೋಚಕ ಹಂತ ತಲುಪುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ