ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ ಅಂಕೋಲಾ ಯೋಜನೆ ಬಗ್ಗೆ ಯಾವುದೇ ಕಾಳಜಿ ವಹಿಸದ ಕೇಂದ್ರ ಸರ್ಕಾರ ಈ ಭಾಗದ ಜನರಿಗೆ ಏನು ಕೊಡಲು ಸಾಧ್ಯ. ಮೋದಿ ಗ್ಯಾರಂಟಿ ಹೆಸರಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಯಾವ ದಾರಿಯಲ್ಲಿ ಹೊರಟಿದೆ ಎಂಬುವುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪರವಾಗಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇವೆ. ಗದಗ, ಬಾಗಲಕೋಟೆ, ರಾಯಚೂರು ಹೋಗಲಿದ್ದೇನೆ. ಚುನಾವಣೆ ಪ್ರಾರಂಭವಾದಾಗ ಅಮೀತ್ ಶಾ, ಮೋದಿ ಹುರುಪಿನಲ್ಲಿದ್ದರು. ಈಗ ಚುನಾವಣೆ ಅವಲೋಕನ ಮಾಡಿದರೇ ನರೇಂದ್ರ ಮೋದಿಯವರ ಬಗ್ಗೆ ಜನರಲ್ಲಿ ಅವಿಶ್ವಾಸ ಬಂದಿದೆ ಎಂದರು.
ಆರು ಜಿಲ್ಲೆಯವರು ನಾಗಾಲ್ಯಾಂಡ್ ನಲ್ಲಿ ಓಟ್ ಮಾಡಲು ಹೋಗಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕಳೆದುಕೊಂಡ ಸರ್ಕಾರ ಮೋದಿ ನೇತೃತ್ವದ ಸರ್ಕಾರ. ಬಾಂಬೆ, ಕಿತ್ತೂರು ಕರ್ನಾಟಕ ಅಭಿವೃದ್ಧಿಯಿಂದ ನೋಡಿದರೇ ಜೋಶಿಯವರ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೇ ಯಾವ ಪುರುಷಾರ್ಥಕ್ಕೆ ಕರ್ನಾಟಕದ ಜನರು ಜೋಶಿಯನ್ನು ಆರಿಸಿ ಕಳಿಸಿದ್ದಾರೆ ಅರ್ಥವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಷ್ಟದ ಮಂತ್ರಿಯಾಗದೇ ಹುಬ್ಬಳ್ಳಿ ಧಾರವಾಡ ಸಚಿವರಾಗಿದ್ದಾರೆ. ಬರ, ಬರಪರಿಹಾರದ ಪ್ರಶ್ನೆ ಬಂದಾಗ ಕಿಂಚಿತ್ತೂ ಛಕಾರ ಎತ್ತಿಲ್ಲ. ನಾವು ಜೋಶಿಯವರು ಒಂದೇ ಒಂದು ಜನರ ಸಮಸ್ಯೆಗೆ ಧ್ವನಿಯಾಗಿರುವ ಪ್ರಸಂಗ ನಾವು ನೋಡಿಲ್ಲ. ಈ ಭಾಗದಲ್ಲಿ ಧಾರವಾಡ ಬೆಳಗಾವಿ ರೈಲ್ವೆ ಲೈನ್, ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಈ ಭಾಗದ ಜನರಿಗೆ ಜೀವನಾಡಿಯಾಗಿದೆ ಆದರೂ ಕೂಡ ಒಂದೇ ಒಂದು ಜನಪರ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆಯಲ್ಲಿ 138 forest clearence ಸಿಕ್ಕಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಶ್ರಮ ವಹಿಸಿದರೂ ಕೇಂದ್ರ ಕಾಳಜಿ ವಹಿಸಿಲ್ಲ. ನಾನು ಅರಣ್ಯ ಸಚಿವರಾಗಿದ್ದಾಗ 80000 ಚದರ ಮೈಲಿಯಷ್ಟು ಸಮಸ್ಯೆ ಪಾರೆಸ್ಟ್ ಕ್ಲಿಯರ್ ಮಾಡಿದೆ, ಅದು ಕೂಡ ಜುಡಪಿ ಅರಣ್ಯ ಪ್ರದೇಶದಲ್ಲಿ ಎಂದ ಅವರು, ಬರ ಪರಿಹಾರ ಕೊಡಬೇಕಾಗಿದ್ದು ಕೇಂದ್ರ ಜವಾಬ್ದಾರಿ 18 ಸಾವಿರಕ್ಕೂ ಹೆಚ್ಚು ಹಣ ಬರಬೇಕು. ಆದರೆ ಕೊಟ್ಟಿದ್ದು, 3000 ಕೋಟಿ. ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿದ ಮೇಲೆ ಬರಪರಿಹಾರ ಹಣ ಬಂದಿರುವುದು ಇತಿಹಾಸದಲ್ಲಿಯೇ ಮೊದಲು ಎಂದು ವ್ಯಂಗ್ಯವಾಡಿದರು.

2018,19ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಹದಾಯಿ ಬಗ್ಗೆ ಭರವಸೆ ನೀಡಿದ್ದರು. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಮೋದಿ ಭರವಸೆ ಕೊಟ್ಟಿದ್ದರು. ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತಿನಿ ಅಂದಿದ್ರು. ಅಧಿಕಾರಕ್ಕೆ ಬಂದ ಮೇಲೆ ಹೊಸ ಸಂಪ್ರದಾಯದ ಮೂಲಕ ಪ್ರಧಾನಿಗಳು ಸುಳ್ಳು ಹೇಳಿದ್ದಾರೆ. ಭದ್ರಾ ಮೇಲ್ದಂಡೆ, ಮಹದಾಯಿ ಬಗ್ಗೆ ನ್ಯಾಷನಲ್ ಫಂಡ್ ಮೀಸಲು ಇಡುವುದಾಗಿ ಹೇಳಿದ್ದರು. ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನದಿಂದ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದು ಈಗ ಹುಸಿಯಾಗಿದೆ. ಕೇಂದ್ರ ಅರಣ್ಯ ಕ್ಲಿಯರೆನ್ಸ ನೀಡದೇ ಕಾಲಹರಣ ಮಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ರೈತರ ಬೆಳೆಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ ಆದರೆ ಮೋದಿಯವರು ವಿದೇಶಕ್ಕೆ ರಪ್ತು ಮಾಡದಂತೆ ನಿಷೇಧಿಸಿದ್ದಾರೆ..ಚುನಾವಣೆ ಬಂದಾಗ ರೈತರು ನೆನಪಾಗುತ್ತಾರೆ, ಮುಗಿದ ಮೇಲೆ ಮರೆತು ಬಿಡ್ತಾರೆ. ರೈತರ ಉಳಿಮೆಗೆ ತಗಲುವ ಖರ್ಚು ದುಪ್ಪಟ್ಟಾಗಿದೆ ಆದರೆ ಆದಾಯ ಕಡಿಮೆಯಾಗಿದೆ. ಕೋಟ್ಯಾದಿಪತಿಗಳ ಉತ್ಪತ್ತಿಯಾಗುತ್ತಿದೆ ವಿನಃ ರೈತ ಮಾತ್ರ ಕೋಟ್ಯಾದಿಪತಿಯಾಗುತ್ತಿಲ್ಲ. ಎಲ್ ಪಿ ಜಿಯಲ್ಲಿ ನಾಯಾಪೈಸೆ ಸಬ್ಸಿಡಿ ಕೊಟ್ಟಿಲ್ಲ ಮೋದಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ಸಬ್ಸಿಡಿ ಕೊಟ್ಟಿದೆ. ಮೋದಿ ಗ್ಯಾರಂಟಿ ಅಂತ ಹೇಳ್ತಿದ್ದಾರೆ, ಪ್ರಜಾಪ್ರಭುತ್ವ ಯಾವ ದಾರಿಯಲ್ಲಿ ಹೊರಟಿದೆ ಎಂದು ಅವರು ಪ್ರಶ್ನಿಸಿದರು.