ಶಿವಮೊಗ್ಗ: ರಾಜ್ಯದಲ್ಲಿ ಎರಡನೆ ಹಂತದ ಲೋಕಸಭೆ ಚುನಾವಣೆಯ ಪ್ರಚಾರ ಬಿರುಸುಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿವಮೊಗ್ಗದಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಕೈ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ರಾಹುಲ್ ಗಾಂಧಿ ಮತಯಾಚನೆ ನಡೆಸಿದರು. ಸುಡು ಬಿಸಿಲಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಿಧಾನ ದೇಶದಲ್ಲಿ ಸಮಾನತೆ ಮತ್ತು ಮೀಸಲಾತಿ ಹಕ್ಕನ್ನು ಜನರಿಗೆ ನೀಡಿದೆ. ಬಿಜೆಪಿ ಸಮಾನತೆ ಮತ್ತು ಮೀಸಲಾತಿಯ ವಿರುದ್ಧವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಕೂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಸಮಾನತೆ ಕೇಳುವವರು ನಕ್ಸಲೀಯರು ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.
ನಿರೀಕ್ಷೆಯಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿಗೆ ಪ್ರಜ್ವಲ್ ರೇವಣ್ಣ ಕರ್ಮಕಾಂಡದ ಸಂಪೂರ್ಣ ಮಾಹಿತಿ ಇತ್ತು. ಆದರೂ ಕೂಡ ಪ್ರಜ್ವಲ್ ರೇವಣ್ಣ ಪರ ಮೋದಿ ಮತಯಾಚಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಮೋದಿ ಮತ ಕೇಳಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಪ್ರಜ್ವಲ್ ರೇವಣ್ಣ ವರ್ತನೆ ಇಡೀ ಮಹಿಳೆಯರಿಗೆ ಮಾಡಿದ ಅವಮಾನ ಎಂದು ರಾಹುಲ್ ಗಾಂಧಿ ಟೀಕಿಸಿದರು. ಪ್ರಜ್ವಲ್ ರೇವಣ್ಣ ಸಾಮೂಹಿಕ ಅತ್ಯಾಚಾರಿ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಕೇಂದ್ರ ಸರ್ಕಾರ ರೈತರ ವಿರೋಧಿಯಾಗಿದೆ. ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿರುವ ಕೇಂದ್ರ ಸರ್ಕಾರ, ರೈತರ ಸಾಲಮನ್ನಾ ಮಾಡಲು ನಿರಾಕರಿಸುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು. ಕೇವಲ ಶ್ರೀಮಂತರ ಪರವಾಗಿ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದರು. ಕಾಂಗ್ರೆಸ್ ಸಭೆಯಲ್ಲಿ ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಬರಪರಿಹಾರ ಬರಲಿದೆ ಎಂದು ಏಳು ತಿಂಗಳ ಕಾಲ ಕಾದು ಕುಳಿತೆವು. ಕೇಂದ್ರ ಸರ್ಕಾರ ರಾಜ್ಯದ ಯಾವುದೇ ಮನವಿಗೆ ಸ್ಪಂದಿಸಿರಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದೆವು. ಇದೀಗ ಕೇಂದ್ರ ಸರ್ಕಾರ ಅತ್ಯಲ್ಪ ಪರಿಹಾರ ನೀಡಿದೆ. ಇದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.