ಬೆಂಗಳೂರು: ರಾಜ್ಯ ರಾಜಧಾನಿ ಮೇಲೆ ವರುಣ ದೇವ ಕೃಪೆ ತೋರಿದ್ದಾನೆ. ಬರೋಬರಿ 160ಕ್ಕೂ ಹೆಚ್ಚು ದಿನಗಳ ಬಳಿಕ ರಾಜಧಾನಿಗೆ ಮಳೆಯ ಆಗಮನವಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿರುವ ಸಿಲಿಕಾನ್ ನಗರದ ಜನರಿಗೆ ಸ್ವಲ್ಮ ನೆಮ್ಮದಿಯಾಗಿದೆ.
ಗುರುವಾರ ಸಂಜೆ ನಗರದ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿದಿತ್ತು. ಇದೀಗ ಎರಡನೆ ದಿನವಾದ ಇಂದು ಕೂಡ ಮಳೆಯಾಗುತ್ತಿದೆ. ಬೆಂಗಳೂರಿನ ಟೌನ್ ಹಾಲ್, ಕೆ. ಆರ್. ಮಾರ್ಕೇಟ್, ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರದಲ್ಲಿ ಮಳೆಯಾಗುತ್ತಿದೆ. ಅನೇಕಲ್‌ನಲ್ಲಿ ಮಳೆ ಸುರಿಯುತ್ತಿದೆ. ಹೆಬ್ಬಗೋಡಿಯಲ್ಲಿ ಕೂಡ ಮಳೆಯಾಗಿದೆ.
ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ನೀರಿನ ತೀವ್ರ ಕೊರತೆಯಿಂದ ನಗರದ ನಿವಾಸಿಗಳು ಸಮಸ್ಯೆ ಎದುರಿಸಿದ್ದರು. ಕುಡಿಯುವ ನೀರಿನ ಕೊರತೆಯಿಂದ ಜನರು ಟ್ಯಾಂಕರ್ ನೀರನ್ನು ಆಶ್ರಯಿಸಬೇಕಾಗಿತ್ತು.
ಪ್ರಧಾನಿ ಮೋದಿ ಕೂಡ ತಮ್ಮ ಚುನಾವಣಾ ಪ್ರಚಾರದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದರು. ಬೆಂಗಳೂರು ಟ್ಯಾಂಕರ್ ಸಿಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಟ್ಯಾಂಕರ್ ಮಾಫಿಯಾದ ಕಪಿಮುಷ್ಟಿಗೆ ಬೆಂಗಳೂರು ಸಿಲುಕಿದೆ ಎಂದು ಆರೋಪಿಸಿದ್ದರು.
ಟ್ಯಾಂಕರ್ ಮಾಫಿಯಾ ಜನರನ್ನು ನೀರಿನ ಹೆಸರಿನಲ್ಲಿ ಸುಲಿಗೆ ಮಾಡುತ್ತಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.
ಇದೀಗ ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು, ಚುನಾವಣೆಯಲ್ಲಿ ಮುಳುಗಿದ್ದ ಬಿಬಿಎಂಪಿ ಯಾವುದೇ ಪೂರ್ವ ಸಿದ್ದತೆ ಮಾಡಿಲ್ಲ. ಮಳೆ ಬಿರುಸುಪಡೆದರೆ ಮಳೆ ಸಂಬಂಧಿತ ಸಮಸ್ಯೆಗಳು ನಗರದಲ್ಲಿ ಪುನಾರ್ವತನೆಯಾಗುವುದರಲ್ಲಿ ಸಂದೇಹ ಇಲ್ಲ
ಗುರುವಾರ ಸುರಿದ ಮಳೆ ಮತ್ತು ಗಾಳಿಯಿಂದ ನಗರದ ಹಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದವು. ಮೊದಲ ಮಳೆಗೆ ಇಂತಹ ಪರಿಸ್ಥಿತಿಯಾದರೆ ಮುಂದೇನು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ