Rahul Gandhi Contest From Rae Barely: ರಾಯಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ

ನವದೆಹಲಿ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೈ ನಾಯಕ ರಾಹುಲ್ ಗಾಂಧಿ ಇದೀಗ ಉತ್ತರಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ರಾಹುಲ್ ಗಾಂಧಿ ಅವರ ಹೆಸರನ್ನು ಅಂತಿಮಗೊಳಿಸಿದೆ. ರಾಯಬರೇಲಿ ಕ್ಷೇತ್ರದಿಂದ ಈ ಹಿಂದೆ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಉತ್ತರಪ್ರದೇಶದ ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರಗಳು ಕಾಂಗ್ರೆಸ್‌ನ ಗಾಂಧಿ ಕುಟುಂಬದ ಸಾಂಪ್ರದಾಯಿಕ ಲೋಕಸಭಾ ಕ್ಷೇತ್ರಗಳಾಗಿವೆ. ಈ ಎರಡೂ ಕ್ಷೇತ್ರಗಳ ಜೊತೆ ಗಾಂಧಿ ಕುಟುಂಬಕ್ಕೆ ನಿಕಟವಾದ ಸಂಬಂಧ ಇದೆ.

ಇದೀಗ ಈ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಭಾಗವಾಗಿ ರಾಹುಲ್ ಗಾಂಧಿ ರಾಯಬರೇಲಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ. ಹಲವು ದಿನಗಳ ಕುತೂಹಲಕ್ಕೆ ಈ ಮೂಲಕ ತೆರೆ ಎಳೆದಿದ್ದಾರೆ. ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆಯನ್ನು ಗೌಪ್ಯವಾಗಿ ಇರಿಸಲಾಗಿತ್ತು. ಕೇರಳದಲ್ಲಿ ಲೋಕಸಭಾ ಚುನಾವಣೆ ಕೊನೆಗೊಂಡ ಬಳಿಕವಷ್ಟೇ ರಾಹುಲ್ ಗಾಂಧಿ ಸ್ಪರ್ಧೆ ಕುರಿತು ಕಾಂಗ್ರೆಸ್ ಹಿರಿಯ ನಾಯಕರು ಮಾತನಾಡಲು ಆರಂಭಿಸಿದರು. ಕೇರಳ ಚುನಾವಣೆ ಮೊದಲು ಮಾತನಾಡಿದ್ದರೇ ಅದು ರಾಹುಲ್ ಸ್ಪರ್ಧೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಆತಂಕ ಮನೆಮಾಡಿತ್ತು.
ಕೇರಳ ಚುನಾವಣೆ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಉತ್ತರಪ್ರದೇಶದಿಂದ ರಾಹುಲ್ ಸ್ಪರ್ಧೆ ಕುರಿತಂತೆ ಅಧಿಕೃತವಾಗಿ ಪ್ರಕಟಿಸಿದೆ. ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಿರಿಯ ನಾಯಕರನ್ನು ಟೀಕಿಸಿದ್ದರು. ಚುನಾವಣಾ ಸೋಲಿನ ಭಯದಿಂದ ಕಾಂಗ್ರೆಸ್ ಹಿರಿಯ ನಾಯಕರು ಹಿಂಬಾಗಿಲಿನ ಮೂಲಕ ಸಂಸತ್ ಪ್ರವೇಶಕ್ಕೆ ಯತ್ನ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದರು. ಪರೋಕ್ಷವಾಗಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿರುವುದನ್ನು ಟೀಕಿಸಿದ್ದರು.

ಇದೀಗ ಗಾಂಧಿ ಪರಿವಾರ ಉತ್ತರ ಪ್ರದೇಶದಲ್ಲಿ ಸ್ಪರ್ಧೆಗೆ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿಕೊಂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯ ಎಲ್ಲ ಸಾಧ್ಯತೆ ಕಂಡು ಬಂದಿದೆ. ಅಮೇಥಿಯಲ್ಲಿ ಗಾಂಧಿ ಪರಿವಾರಕ್ಕೆ ಹತ್ತಿರವಾಗಿರುವ ಕೆ ಎಲ್ ಶರ್ಮಾಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಬಿಜೆಪಿ ನಾಯಕಿ ಸ್ಮತಿ ಇರಾನಿ ಅಮೇಥಿಯಿಂದ ಸ್ಪರ್ಧಿಸುತ್ತಿದ್ದಾರೆ.

More News

You cannot copy content of this page