ನವದೆಹಲಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಪ್ರಚಾರ ಮುಗಿಲು ಮುಟ್ಟಿರುವಂತೆಯೇ ತಂತ್ರಜ್ಞಾನದ ದುರುಪಯೋಗ ಕೂಡ ಹೆಚ್ಚಾಗಿದೆ. ಈ ಚುನಾವಣೆಯಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಹೆಚ್ಚಾಗಿದೆ.
ಸದುದ್ದೇಶಕ್ಕಿಂತ ದುರುದ್ದೇಶಕ್ಕೆ ತಂತ್ರಜ್ಞಾನ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜಕಾರಣಿಗಳು ಇದಕ್ಕೆ ಬಲಿ ಪಶುಗಳಾಗುತ್ತಿರುವ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ಸಾಮಾಜಿಕ ಜಾಲ ತಾಣದ ಪೋಸ್ಟ್‌ಗಳ ಮೇಲೆ ಹದ್ದಿನ ಕಣ್ಣು ಇರಿಸಿವೆ
ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ನಕಲಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಸಂಪರ್ಕ ಇದೆ ಎಂದು ಶಂಕಿಸಲಾಗಿರುವ ಅರುಣ್ ರೆಡ್ಡಿ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನಲ್ಲಿ ದೆಹಲಿ ಪೊಲೀಸರ ವಿಶೇಷ ತಂಡ ಅರುಣ್ ರೆಡ್ಡಿಯನ್ನು ಬಂಧಿಸಿ ದೆಹಲಿಗೆ ಕರೆದುಕೊಂಡುಹೋಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಖಾತೆಹೊಂದಿರುವ ಮೊದಲಿಗೆ ಅಮಿತ್ ಷಾ ಅವರ ವಿಡಿಯೋ ಹಂಚಿದ್ದ ಎಂದು ಆರೋಪಿಸಲಾಗಿದೆ
ಇಂದು ಅರುಣ್ ರೆಡ್ಡಿಯನ್ನು ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅಮಿತ್ ಷಾ ನಕಲಿ ವಿಡಿಯೋ ಪ್ರಕರಣ ಸಂಬಂಧ ದೆಹಲಿ ಪೊಲೀಸರು ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಡಿಯೋ ಶೇರ್ ಮಾಡಿರುವ ಆರೋಪಕ್ಕೆ ತುತ್ತಾಗಿದ್ದಾರೆ.
ಈ ಮಧ್ಯೆ ಸಾರ್ವಜನಿಕ ಸಭೆಗಳಲ್ಲಿ ಪ್ರಧಾನಿ ಮೋದಿ ಕೂಡ ನಕಲಿ ವಿಡಿಯೋಗಳ ಕುರಿತು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹೇಳಿಕೆಗಳನ್ನು ತಿರುಚುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಯಾವುದೇ ಪ್ರಕರಣ ಗಮನಕ್ಕೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಧಾನಿ ಕೂಡ ಜನರಿಗೆ ಮನವಿ ಮಾಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ.
ತಂತ್ರಜ್ಞಾನ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು. ಜನರನ್ನು ಬೆಸೆಯಬೇಕೇ ಹೊರತು ಅಂತರ ಸೃಷ್ಟಿಸಬಾರದು. ಇದು ಪ್ರಜ್ಞಾವಂತ ಮತದಾರರ ಅನಿಸಿಕೆಯಾಗಿದೆ