ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಾಂಗ್ರೆಸ್‌ನ ಮಾಜಿ ನಾಯಕರೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ತೀರ್ಪು ರದ್ದಾಗುವ ಸಾಧ್ಯತೆ ಇದೆ ಎಂದು ಮಾಜಿ ಕೈ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಚಾರ್ಯ ಪ್ರಮೋದ್ ಕೃಷ್ಣಂ ಈ ಆರೋಪ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಅಯೋಧ್ಯೆಯ ತೀರ್ಪು ನೀಡಿದ ದಿನ ರಾಹುಲ್ ಗಾಂಧಿ ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿದ್ದರು. ಕೋರ್ಟ್ ತೀರ್ಪಿನ ಬಗ್ಗೆ ಚರ್ಚೆ ನಡೆಸಿದ್ದರು ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಉತ್ತರಪ್ರದೇಶದ ಸಂಬಾಲ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಮೋದ್ ಕೃಷ್ಣೞಂ, 32 ವರ್ಷಗಳ ಕಾಲ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾಬಾನು ಪ್ರಕರಣದಂತೆ ಅಯೋಧ್ಯೆ ತೀರ್ಪು ರದ್ದುಪಡಿಸುವ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದರು ಎಂದು ಪ್ರಮೋದ್ ಕೃಷ್ಣಂ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಅವರು ಶಾಬಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಅಮಾನ್ಯಗೊಳಿಸಿ ಕಾನೂನು ಜಾರಿಮಾಡಿದ್ದರು.
ದೇಶದಲ್ಲಿ ಮೂರನೆ ಹಂತದ ಲೋಕಸಭೆ ಚುನಾವಣೆ ನಾಳೆ ನಡೆಯಲಿದ್ದು, ಈ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆಚಾರ್ಯ ಪ್ರಮೋದ್ ಕೃಷ್ಣಂ ಮಾಡಿರುವ ಆರೋಪದಲ್ಲಿ ಎಷ್ಟು ಸತ್ಯ ಇದೆ ಎಂಬುದು ಮುಂದಿನ ದಿನಗಳ ತನಿಖೆಯಲ್ಲಿ ತಿಳಿದುಬರಲಿದೆ.
500 ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ರಾಮ ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದಾನೆ. ರಾಮನ ಭಕ್ತರು ಎಲ್ಲ ಪಕ್ಷಗಳಲ್ಲಿ ಇದ್ದಾರೆ. ಹೀಗಿರುವಾಗ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಷ್ಟು ಸುಲಭದಲ್ಲಿ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್‌ಗೆ ಕಷ್ಟವಾಗಲಿದೆ ಎಂಬುದು ಸಾರ್ವತ್ರಿಕ ಅನಿಸಿಕೆ.
ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದು ಜೂನ್ 4ರಂದು ಗೊತ್ತಾಗಲಿದೆ. ಅಲ್ಲಿಯ ವರೆಗೆ ರಾಮ ಮಂದಿರ ಕುರಿತಾದ ಆರೋಪ- ಪ್ರತ್ಯಾರೋಪ ಮುಂದುವರಿಯುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ