ಬೆಂಗಳೂರು: ಉತ್ತರಭಾರತದ ರಾಜಕಾರಣಿಗಳ ಮಕ್ಕಳಿಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜಕಾರಣಿಗಳ ಮಕ್ಕಳಿಗೆ ಮೊನ್ನೆ ಮೊನ್ನೆಯ ತನಕ ಒಳ್ಳೆಯ ಹೆಸರಿತ್ತು.
ಅಪ್ಪನ ಪ್ರಭಾವ ಬಳಸದೆ ಅವರ ಮಕ್ಕಳು ತಮ್ಮ ಸ್ವಯಂ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಇತ್ತು. ರಾಜಕೀಯ ಪಕ್ಷಗಳು ಬೇರೆ ಬೇರೆಯಾಗಿದ್ದರೂ ಹಲವು ರಾಜಕೀಯ ಕುಟುಂಬಗಳು ಕರ್ನಾಟಕದಲ್ಲಿ ಬೀಗರಾಗಿದ್ದಾರೆ. ರಾಜಕಾರಣ ಬೇರೆ, ಕೌಟುಂಬಿಕ ಸಂಬಂಧ ಬೇರೆ. ಇವುಗಳ ಮಧ್ಯೆ ಲಕ್ಷ್ಮಣ ರೇಖೆ ಎಳೆದಿದ್ದರು.
ಚುನಾವಣೆ ವೇಳೆ ಮಾತ್ರ ರಾಜಕೀಯ. ಉಳಿದ ಸಂದರ್ಭಗಳಲ್ಲಿ ಸಂಬಂಧಿಕರು ಎಂಬ ಮಾತು ಕೇಳಿ ಬರುತ್ತಿತ್ತು.
ರಾಜ್ಯದ ಬಹುತೇಕ ರಾಜಕಾರಣಿಗಳ ಮಕ್ಕಳು ಹೆಚ್ಚು ಕಡಿಮೆ ಶಿಸ್ತು ಬದ್ದ ಜೀವನ ಪಾಲಿಸುತ್ತಿದ್ದರು. ತಮ್ಮ ಕೃತ್ಯದಿಂದ ತಂದೆಯ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಬರಬಾರದು ಎಂಬ ಹೆದರಿಕೆ ಇದಕ್ಕೆ ಮುಖ್ಯ ಕಾರಣ.
ಇದೀಗ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಿಂದ ಎಲ್ಲವೂ ತಲೆಕೆಳಗಾಗಿದೆ. ಕರ್ನಾಟಕದ ರಾಜಕಾರಣಿಗಳ ಮಕ್ಕಳ ಕುರಿತ ಅಭಿಪ್ರಾಯ ಬದಲಾಗಿದೆ. ಇಂತವರು ಇದ್ದಾರೆಯೇ ಎಂದು ರಾಷ್ಟ್ರೀಯ ಮಟ್ಟದ ಸುದ್ದಿವಾಹಿನಿಗಳು ನಿರಂತರ ವರದಿ ಪ್ರಸಾರ ಮಾಡುತ್ತಲೆ ಇವೆ. ಇದು ರಾಜಕಾರಣಿಗಳ ಮಕ್ಕಳು ಯಾಕೆ ಹಾದಿ ತಪ್ಪುತ್ತಿದ್ದಾರೆ ಎಂಬ ಬಗ್ಗೆ ಗಂಭೀರವಾದ ಚರ್ಚೆ ಹುಟ್ಟು ಹಾಕಿದೆ.
ರಾಜಕಾರಣಿಗಳ ಮಕ್ಕಳು ಹಾದಿ ತಪ್ಪುತ್ತಿರುವುದಕ್ಕೆ ಮೊದಲ ಕಾರಣ ಅತೀಯಾದ ಶ್ರೀಮಂತಿಕೆ. ರಾಜಕಾರಣಿಗಳ ಮಕ್ಕಳು ಹುಟ್ಟಿನಿಂದಲೇ ಕೋಟ್ಯಾಧಿಪತಿಗಳು.
ತಂದೆ ಮಾಡಿದ ಅಪಾರ ಹಣದ ಉತ್ತಾರಾಧಿಕಾರಿಯಾಗಿರುವ ಈ ಶ್ರೀಮಂತ ಮಕ್ಕಳು ಕಷ್ಟದ ಹಾದಿ ತುಳಿದು ಬಂದವರಲ್ಲ. ಸಹಜವಾಗಿಯೆ ಅತೀ ಚಿಕ್ಕ ವಯಸ್ಸಿನಲ್ಲಿ ರಾಜಕಾರಣಿಗಳ ಮಕ್ಕಳು ಹಾದಿ ತಪ್ಪಲು ಆರಂಭಿಸುತ್ತಾರೆ.
ಆರಂಭದಲ್ಲಿ ಹಾದಿ ತಪ್ಪಿದಾಗ ಅಡ್ಡ ದಾರಿ ಹಿಡಿದ ಮಗನನ್ನು ಶಿಕ್ಷಿಸುವ ಬದಲಾಗಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ರಕ್ಷಿಸಲು ಪ್ರಭಾವ ಬಳಸುತ್ತಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ.
ಇದರಿಂದಾಗಿ ತಪ್ಪು ಮಾಡಿದರೆ ಸಿಕ್ಕಿ ಬೀಳಲ್ಲ. ಏನು ಆಗಲ್ಲ ಎಂಬ ಮೊಂಡು ಧೈರ್ಯ ಅವರ ಮಕ್ಕಳಿಗೆ ಬರುತ್ತದೆ. ಇದು ಮುಂದಿನ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ.
ಸದಾ ರಾಜಕಾರಣದಲ್ಲಿ ಮುಳುಗಿರುವ ರಾಜಕಾರಣಿಗಳು ದಿನದ ಸ್ವಲ್ಪ ಹೊತ್ತು ತಮ್ಮ ಮನೆಯ ಕಡೆ ಗಮನ ಹರಿಸಬೇಕಾಗಿದೆ. ವಯಸ್ಸಿಗೆ ಬಂದ ಮಗ ಅಥವಾ ಮಗಳ ಚಟುವಟಿಕೆ ಬಗ್ಗೆ ನಿಗಾ ವಹಿಸಬೇಕಾಗಿದೆ.
ಮಕ್ಕಳ ಚಟುವಟಿಕೆ ಏನು, ಅವರ ಸ್ನೇಹಿತರು ಯಾರು ಎಂಬ ಬಗ್ಗೆ ನಿಗಾ ಇದ್ದರೆ ಚೆನ್ನಾಗಿರಲಿದೆ.
ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಅಪ್ಪ ರಾಜಕಾರಣಿಯಾದರೆ ಮಗನ ದರ್ಶನ ಮಾಡುವುದು ತಿಂಗಳಿಗೆ ಒಮ್ಮೆ ಎಂಬತಂಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಮಕ್ಕಳು ಹಾದಿ ತಪ್ಪಲು ಪ್ರಮುಖ ಕಾರಣವಾಗಿದೆ. ಹಿಂದೆ ನಲಪಾಡ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಮಾಜಿ ಸಚಿವ ಅಶೋಕ್ ಪುತ್ರನ ಕಾರು ಅಪಘಾತ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕವಷ್ಟೆ ಸತ್ಯಾಂಶ ಹೊರಬರಲಿದೆ. ಒಂದಂತೂ ಸತ್ಯ ಇಂತಹ ಘಟನೆಗಳಿಗೆ ಆಸ್ಪದ ನೀಡದಿರುವ ಶಕ್ತಿ ಪೋಷಕರ ಕೈಯಲ್ಲಿದೆ. ರಾಜಕಾರಣಿಗಳ ಕೈಯಲ್ಲಿದೆ. ಇದು ಸತ್ಯ