ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಎಸ್ ಐಟಿ ವಿಚಾರಣೆಗೆ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖವಾಗಿ ಈ ವಿಷಯ ಪ್ರಸ್ತಾಪ ಮಾಡಿದ ಅವರು; ರಾಹುಲ್ ಗಾಂಧಿ ಅವರು ಅಂಕಿ ಅಂಶಗಳ ಸಮೇತ ಈ ವಿಷಯ ಹೇಳಿದ್ದಾರೆ. ಎಲ್ಲರಿಗಿಂತ ಮೊದಲೇ ಈ ಮಾಹಿತಿ ಅವರಿಗೆ ಸಿಕ್ಕಿರಬೇಕು. ಪೆನ್ ಡ್ರೈವ್ ನಲ್ಲಿದ್ದ ವಿಡಿಯೋಗಳನ್ನು ಅವರು ನೋಡಿರಬೇಕು. ಹೀಗಾಗಿ ಅವರಿಂದ ತನಿಖಾ ತಂಡ ಮಾಹಿತಿ ಪಡೆಯಬೇಕು. ಕೂಡಲೇ ಅವರಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಅವರು ಆಗ್ರಹಪಡಿಸಿದರು.
ರಾಹುಲ್ ಗಾಂಧಿ ಅವರು ಅತ್ಯಾಚಾರಕ್ಕೆ ಒಳಗಾದವರಲ್ಲಿ 16 ವರ್ಷದೊಳಗಿನ ಹೆಣ್ಣುಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ಅವರು ಯಾವ ಆಧಾರದಲ್ಲಿ ಈ ಹೇಳಿಕೆ ಕೊಟ್ಟರು? ಪೋಕ್ಸೋ ಪ್ರಕರಣದಲ್ಲಿ ಕೇಸ್ ಹಾಕಬೇಕೆಂದು ಅವರು ಒತ್ತಾಯ ಮಾಡಿದ್ದಾರೆ. “ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರೇ. ಯಾಕಪ್ಪಾ.. ಇನ್ನೂ ರಾಹುಲ್ ಗಾಂಧಿಗೆ ನೋಟಿಸ್ ಕೊಟ್ಟಿಲ್ಲ?” ಎಂದು ಅವರು ಪ್ರಶ್ನಿಸಿದರು.
ಪೆನ್ ಡ್ರೈವ್ ನಲ್ಲಿ ಹೆಣ್ಣುಮಕ್ಕಳ ಪೋಟೋ ಹಾಕಿ ಏನು ಮಾಡಿದಿರಿ ನೀವು,? ರಾಜ್ಯದ ಮಾನ ಮರ್ಯಾದೆ ಹಾಳು ಮಾಡಿದವರು ನೀವು. ಇದರಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವರನ್ನು ಯಾಕೆ ಎಳೆದು ತರುತ್ತೀರಿ? ಜೆಡಿಎಸ್ ಬಿಜೆಪಿ ಮೈತ್ರಿ ಆದಾಗಲೇ ನಿಮ್ಮ ನಿದ್ದೆ ಹೋಗಿದೆ. ಅದಕ್ಕೆ ಈ ಪ್ರಕರಣವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಮಾಡಿಸುತ್ತಿದ್ದೀರಿ. ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಂದೀಪ ಸುರ್ಜೇವಾಲ ಅವರು ಇದ್ದಾರಲ್ಲ, ಸಂತ್ರಸ್ತರಿಗೆ ಹಣಕಾಸು ಪರಿಹಾರ ಕೊಡಲಾಗುವುದು ಎಂದು ಹೇಳಿದ್ದಾರೆ. ಯಾವ ವಿಡಿಯೋ ಮೊದಲು ಬಿಡಬೇಕು, ಯಾವುದನ್ನು ಆಮೇಲೆ ಬಿಡಬೇಕು ಎಂದು ಟಿಕ್ ಮಾಡಿದ್ರಲ್ಲ ಸುರ್ಜೇವಾಲ ಅವರೇ.. ಯಾವುದನ್ನು ಯಾವಾಗ ಬಿಡಬೇಕು ಎಂದು ಯಾರಪ್ಪ ಪ್ಲಾನ್ ಮಾಡಿದ್ದು? ಈಗ ನೋಡಿದರೆ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಿದ್ದೀರಿ. ನಾಚಿಕೆ ಆಗೋದಿಲ್ಲವೇ ಎಂದು ಕಿಡಿಕಾರಿದರು.