ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣವನ್ನು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕಲಿಗ ಸಚಿವರು ಮತ್ತು ಶಾಸಕರ ನಡೆಯನ್ನು ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು. ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕುಮಾರಸ್ವಾಮಿ ನೇರ ಸವಾಲು ಹಾಕಿದರು. ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಅಗತ್ಯ ನನಗೆ ಇಲ್ಲ ಎಂದು ಕುಮಾರಸ್ವಾಮಿ ಗುಡುಗಿದರು.
ಇಡೀ ಪ್ರಕರಣವನ್ನು ಏಕಾಂಗಿಯಾಗಿ ಎದುರಿಸುತ್ತೇನೆಯ ಯಾರ ಬೆಂಬಲ ಕೂಡ ನನಗೆ ಬೇಕಾಗಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ನಾನು ಹಿಟ್ ಆ್ಯಂಡ್ ರನ್ ಮಾಡುವ ವ್ಯಕ್ತಿ ಅಲ್ಲ. ಇಡೀ ಪ್ರಕರಣವನ್ನು ನೇರವಾಗಿ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಸವಾಲು ಹಾಕಿದ್ದಾರೆ. ಇಡೀ ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ತಪ್ಪು ಯಾರು ಮಾಡಿದ್ದರೂ ಅವರ ವಿರುದ್ಧ ಕ್ರಮವಾಗಲೇ ಬೇಕು. ಇದರಲ್ಲಿ ಎರಡು ಮಾತಿಲ್ಲ ಎಂದು ಕುಮಾರಸ್ವಾಮಿ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.
ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಮತ್ತೆ ಗುಡುಗಿದ್ದಾರೆ. ನನ್ನನ್ನು ಕಥಾನಾಯಕನಾಗಿ ಮಾಡುವ ಷಡ್ಯಂತ್ರ ನಡೆದಿದೆ ಎಂದು ಡಿ ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಟೀಕಿಸಿದ್ದಾರೆ. ದೇವೇಗೌಡ ಅವರ ನಾಲ್ಕು ಜನ ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾಮೀನು ಪಡೆಯಲು ಬಂದಿದ್ದ ವಕೀಲನನ್ನು ಬಿಡಲಿಲ್ಲ. ತನಿಖೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದು ಕೂಡ ನನಗೆ ಗೊತ್ತಾಗುತ್ತಿಲ್ಲ. ಸರ್ಕಾರಕ್ಕೆ ಇಡೀ ಪ್ರಕರಣದಲ್ಲಿ ಬೇಕಾಗಿರುವುದು ಪ್ರಚಾರ ಮಾತ್ರ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂಬ ಉದ್ದೇಶ ಕಾಣಿಸುತ್ತಿಲ್ಲ. ಪೆನ್ ಡ್ರೈವ್ ಹಂಚಿದ್ದವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ರಾಜ್ಯಪಾಲರಿಗೆ ದೂರು
ಈ ಮಧ್ಯೆ ರಾಜ್ಯಪಾಲರನ್ನು ಭೇಟಿ ಮಾಡಿರುವ ಕುಮಾರಸ್ವಾಮಿ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯ ಕುರಿತು ದೂರು ನೀಡಿದ್ದಾರೆ. ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ರಾಜ್ಯಪಾಲರಿಗೆ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.