ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸ ಪ್ರಕರಣ ದಾಖಲಾಗಿದ್ದು, ಮೂರನೆ ಎಫ್ಐಆರ್‌ನಲ್ಲಿ ಕಠಿಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇ 8ರಂದು ಮೂರನೆ ಎಫ್ಐಆರ್ ದಾಖಲಿಸಲಾಗಿದೆ. ಇದರಿಂದಾಗಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕುಡಿಕೆ ಇನ್ನಷ್ಟು ಬಲಗೊಂಡಿದೆ.
ಐಪಿಸಿ376(2)(N), 376(2)(K), 354(A), 354(B), 354(C)ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಸೆಕ್ಷನ್ ಹಾಕಲಾಗಿದೆ.
354(A) – ಲೈಂಗಿಕ ಸುಖಕ್ಕೆ ಬೇಡಿಕೆ ಇಟ್ಟಿರುವ ಆರೋಪ ಹೊರಿಸಲಾಗಿದೆ. 354(B) – ಬಟ್ಟೆ ಹಿಡಿದು ಎಳೆದಾಡಿದ ಆರೋಪ ಹೊರಿಸಲಾಗಿದೆ.
354(C) ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಿದ ಆರೋಪ ಹೊರಿಸಲಾಗಿದೆ. ಇದರ ಜೊತೆ ಬೆದರಿಕೆ ಆರೋಪದ ಸೆಕ್ಷನ್ ಕೂಡ ಸೇರಿಸಲಾಗಿದೆ.
ಯಾವುದೇ ಕಾರಣಕ್ಕೂ ಪ್ರಜ್ವಲ್ , ಕಾನೂನಿನ ವಿಚಾರಣೆಯಿಂದ ತಪ್ಪಿಸಿಕೊಳ್ಳದಿರಲು ಕಠಿಣ ಸೆಕ್ಷನ್ ಹಾಕಲಾಗಿದೆ ಎಂದು ವಿಶ್ಲೇಷಿಸಲಾಗಿದೆ
ಈ ಮಧ್ಯೆ ಮಂಡ್ಯದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ.
ಹೆಣ್ಣು ಮಕ್ಕಳ ವಿಡಿಯೋ ವೈರಲ್ ಆಗಿದೆ. ಸರ್ಕಾರ ರಕ್ಷಣೆ ನೀಡಬೇಕಾಗಿದೆ. ಸಂತ್ರಸ್ತೆಯರ ರಕ್ಷಣೆ ಸರ್ಕಾರ ಖಾತರಿಪಡಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ರೇವಣ್ಣ ಭೇಟಿಗೆ ಮೂರು ದಿನ ಅವಕಾಶ ಸಿಗುವ ಸಾಧ್ಯತೆ ಕ್ಷೀಣಿಸಿದೆ.