ಮಡಿಕೇರಿ: ರಾಜ್ಯದ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಅತ್ಯಂತ ಭೀಕರ ಹತ್ಯೆ ನಡೆದಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿನಿಯ ಹತ್ಯೆ ಮಾಡಿರುವ ಆರೋಪಿ ರುಂಡ ಸಮೇತ ಪರಾರಿಯಾಗಿದ್ದಾನೆ. ತಲೆ ಕತ್ತರಿಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಸೂರ್ಲಬ್ಬಿ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದ ಏಕೈಕ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲಾಗಿದೆ.
ಪ್ರಕಾಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಅಪ್ರಾಪ್ತೆಯನ್ನು ಮದುವೆಯಾಗಲು ಪ್ರಕಾಶ್ ನಿರ್ಧರಿಸಿದ್ದ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲದ ಕಾರಣ ಮದುವೆ ಪ್ರಸ್ತಾಪ ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ದ್ವೇಷದಿಂದ ಆರೋಪಿ ಪ್ರಕಾಶ್ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಹತ್ಯೆಯಿಂದಾಗಿ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನೆಲೆಸಿದೆ.ಹತ್ಯೆ ನಡೆದಿರುವ ಸ್ಥಳಕ್ಕೆ ಕೊಡಗು ಎಎಸ್ಪಿ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಎಎಸ್ಪಿ ಸುಂದರ್ ರಾಜ್ ಮತ್ತು ತಂಡ ಆರೋಪಿಗೆ ಹುಡುಕಾಟ ನಡೆಸುತ್ತಿದೆ. ಆರೋಪಿಯ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಮಲಗಿದ್ದ ಮಹಿಳೆಯ ಬರ್ಬರ ಹತ್ಯೆ
ಇನ್ನೊಂದೆಡೆ ಮಲಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರು ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಯಲಗುಡಿಗೆ ಗ್ರಾಮದ ಸವಿತಾ (60) ಎಂದು ಗುರುತಿಸಲಾಿದೆ. ಸವಿತಾ ಭಿಕ್ಷಾಟನೆ ಮಾಡಿ ಜೀವಿಸುತ್ತಿದ್ದರು. ಅವರೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಪೂರ್ಣೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಇದೀಗ ಬಂಧಿಸಲಾಗಿದೆ.