ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಸುದ್ದಿಯಲ್ಲಿರುವ ವಕೀಲ ದೇವರಾಜೇಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೇವರಾಜೇಗೌಡ ವಿರುದ್ಧ ಇದೀಗ ಅತ್ಯಾಚಾರ ಆರೋಪ ಕೇಸ್ ದಾಖಲಾಗಿದೆ.
ಈ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊರಿಸಲಾಗಿತ್ತು. ಇದೀಗ ಸಂತ್ರಸ್ಥೆ ನೀಡಿದ ಮರು ಹೇಳಿಕೆ ಆಧಾರದಲ್ಲಿ ಅತ್ಯಾಚಾರ ಕೇಸ್ ದಾಖಲುಮಾಡಲಾಗಿದೆ. ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಮೊದಲು ಐಪಿಸಿ ಸೆಕ್ಷೆನ್ 354 A, 354 C, 448, 504,506 ಅಡಿ ಕೇಸ್ ದಾಖಲು ಮಾಡಲಾಗಿತ್ತು.
ಏಪ್ರಿಲ್ 1. ರಂದು ನೀಡಿದ್ದ ಕೇಸ್ ಗೆ ಹೊಸ ಸೆಕ್ಷೆನ್ ಸೇರ್ಪಡೆಗೊಳಿಸಲಾಗಿದೆ.
ಸಂತ್ರಸ್ಥ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕೂಡ ಗುರಿಪಡಿಸಲಾಗಿದೆ.
ಹೊಳೆನರಸೀಪುರ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ಥೆಯ ವಿರುದ್ಧ ವಕೀಲ ದೇವರಾಜೇಗೌಡ ಹನಿಟ್ರ್ಯಾಪ್ ಆರೋಪ ಹೊರಿಸಿ ದೂರು ನೀಡಿದ್ದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ದೇವರಾಜೇಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಇದೇ ವೇಳೆ ಎಸ್ಐಟಿ ಅಧಿಕಾರಿಗಳಿಗೆ ತನಿಖಾ ತಂಡದ ಮುಖ್ಯಸ್ಥರಾಗಿರುವ ಬಿ ಕೆ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ತನಿಖೆಯ ಯಾವುದೇ ಹಂತದಲ್ಲಿ ಮಾಹಿತಿ ಸೋರಿಕೆಯಾಗಬಾರದು ಎಂದು ಸೂಚನೆ ನೀಡಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವ ಮುನ್ನ, ವಿಚಾರಣೆಯ ನಂತರ ಕೆಲ ಮಾಹಿತಿ ಸೋರಿಕೆಯಾದ ಹಿನ್ನಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಎಸ್.ಐ.ಟಿ ವಿಚಾರಣೆಗೂ ಮುನ್ನಾ ಅಜ್ಞಾತ ಸ್ಥಳದಿಂದ ಕಾರ್ತಿಕ್ ವಿಡಿಯೋ ಪ್ರಸಾರ ಮಾಡಿದ್ದ. ಅದಲ್ಲದೇ ಎಸ್‌ಐಟಿ ವಿಚಾರಣೆ ನಂತರ ವಕೀಲ ದೇವರಾಜೇಗೌಡ ಕೂಡ ರಾಜಕಾರಣಿಗಳು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ಎಸ್ಐಟಿ ಮುಖ್ಯಸ್ಥರು ಆದೇಶ ನೀಡಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಆರು ಪ್ರತ್ಯೇಕ ತಂಡಗಳಾಗಿ ಎಸ್ಐಟಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ತಂಡದ ತನಿಖೆ ಕುರಿತಂತೆ ಮತ್ತೊಂದು ತಂಡದ ಜೊತೆ ಚರ್ಚೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಏನೇ ಮಾಹಿತಿ ಇದ್ದರೂ ತನಿಖಾ ತಂಡದ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.