ಬೆಂಗಳೂರು: ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬಂದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿನಾಯಕ ಹಾಗೂ ವಕೀಲ ಅವರನ್ನು ಪೊಲೀಸರು ಬಂಧಿಸಿರುವುದಕ್ಕೆ ಕಮಲ ನಾಯಕರು ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಂಧನವನ್ನು ತೀವ್ರವಾಗಿ ಖಂಡಿಸಿದರು.
ಸ್ವಾರ್ಥ ರಾಜಕಾರಣ, ಪಕ್ಷದ ರಾಜಕಾರಣ ಬಂಧನ ವಿಚಾರದಲ್ಲಿ ಎದ್ದು ಕಾಣುತ್ತಿದೆ ಎಂದು ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ವಕೀಲ ದೇವರಾಜೇಗೌಡನನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಹಿಟ್ಲರ್‌ನನ್ನ ಮೀರಿಸೋ ಆಡಳಿತ ಇದೆ. ಇಡೀ ಕಿಡ್ನಾಪ್ ಪ್ರಕರಣ ಪ್ರಶ್ನಾರ್ಥಕವಾಗಿದೆ.
ದೇವರಾಜೇಗೌಡ ತಮ್ಮಲಿರುವ ಮಾಹಿತಿಯನ್ನು ಎಲ್ಲಿ ಹೇಳಬಹುದು ಅನ್ನೋ ಕಾರಣಕ್ಕೆ ಅವರ ಬಂಧನವಾಗಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ತನಿಖೆಗೆ ನೇಮಕವಾಗಿರುವ
SIT ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡ್ತಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಅಶೋಕ್ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವರಾಜೇಗೌಡ ಬಂಧನ ಪ್ರಕರಣ ಸರಿಯಾದ ಕ್ರಮವಲ್ಲ ಎಂದು ಅಶೋಕ್ ಹೇಳಿದ್ದಾರೆ.
ಪ್ರಕರಣ ಸಂಬಂಧ ಸಿಎಂ ಹಾಗೂ ಡಿಸಿಎಂ ಹೆಸರು ಹೇಳದಂತೆ ಬೆದರಿಕೆ ಹಾಕಲಾಗಿದೆ. ಇದೇ ರೀತಿ ವರ್ತನೆ ಮುಂದುವರಿದರೆ ಬಿಜೆಪಿ ಸುಮ್ಮನೆ ಕೂರಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕ ಸಿ ಟಿ ರವಿ ಕೂಡ ವಕೀಲ ದೇವರಾಜೇಗೌಡ ಬಂಧನವನ್ನು ಖಂಡಿಸಿದ್ದಾರೆ. ಇನ್ನಷ್ಟು ಆಡಿಯೋ ಬಿಡುಗಡೆ ತಡೆಗಟ್ಟಲು ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ ಎಂದು ಸಿ ಟಿ ರವಿ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಸಿಟಿ ರವಿ ಆಗ್ರಹಿಸಿದ್ದಾರೆ.
ಇದೇ ವೇಳೆ ಬೆಳಗ್ಗೆಯಿಂದ ನಡೆದ ಸತತ ವಿಚಾರಣೆ ಬಳಿಕ ಅಂತಿಮವಾಗಿ ವಕೀಲ ದೇವರಾಜೇಗೌಡರನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಹೊಳೆನರಸೀಪುರದ ಠಾಣೆಯಲ್ಲಿ ದೇವರಾಜೇಗೌಡರಿಗೆ ತನಿಖಾಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದರು. ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಇದ್ದ ಮೊಬೈಲ್ ಸೀಜ್ ಮಾಡಲಾಗಿದೆ. ಇದೀಗ ವೈದ್ಯಕೀಯ ಪರೀಕ್ಷೆಗೂ ದೇವರಾಜೇಗೌಡರನ್ನು ಗುರಿಪಡಿಸಲಾಗಿದೆ.