ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರಂಭವಾಗಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರು ಇದೀಗ ಸ್ವಲ್ಪ ನೆಮ್ಮದಿಯಾಗಿದ್ದಾರೆ. ತಾಪಮಾನದಲ್ಲಿ ಕೂಡ ಸ್ವಲ್ಪ ಇಳಿಕೆಯಾಗಿದೆ.
ಇದೀಗ ಮಳೆಯ ಆಗಮನದೊಂದಿಗೆ ಜನರು ಗಾಬರಿಯಾಗುವಂತಹ ವಿಷಯ ಹೊರಬಿದ್ದಿದೆ. ಹೌದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ 50ರಿಂದ 60 ಡೆಂಗ್ಯೂ ಕೇಸ್ ವರದಿಯಾಗುತ್ತಿದೆ.
ಏಪ್ರಿಲ್ ನಿಂದ ಮೇ 10ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಒಟ್ಟು 1974 ಟೆಸ್ಟ್ ಗಳಲ್ಲಿ 930 ಜನರಿಗೆ ಡೆಂಗ್ಯು ಪಾಸಿಟಿವ್ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು 2500 ಡೆಂಗ್ಯು ಪ್ರಕರಣ ವರದಿಯಾಗಿದೆ. ಮಳೆಯ ಹಿನ್ನೆಲೆ ಡೆಂಗ್ಯು ನಿರ್ಲಕ್ಷ್ಯ ಮಾಡಿದ್ರೆ ಇನ್ನೂ ಹೆಚ್ಚಳವಾಗುವ ಆತಂಕ ಎದುರಾಗಿದೆ.
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಅತಿಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗಿದೆ. ಒಟ್ಟು 453 ಪ್ರಕರಣ ದಾಖಲಾಗಿದೆ.
ಡೆಂಗ್ಯೂ ಜ್ವರದ ವಲಯವಾರು ಮಾಹಿತಿ ಇಂತಿದೆ
- ಬೊಮ್ಮನಹಳ್ಳಿ ವಲಯ – 20 ಪ್ರಕರಣ
- ದಾಸರಹಳ್ಳಿ ವಲಯ – 2 ಪ್ರಕರಣ
- ಪೂರ್ವ ವಲಯ- 224 ಪ್ರಕರಣ
- ಮಹದೇವಪುರ – 97 ಪ್ರಕರಣ
- ಆರ್ ಆರ್ ನಗರ – 18 ಪ್ರಕರಣ
- ದಕ್ಷಿಣ ವಲಯ – 453 ಪ್ರಕರಣ
- ಪಶ್ಚಿಮ ವಲಯ – 99 ಪ್ರಕರಣ
- ಯಲಹಂಕ – 17 ಪ್ರಕರಣ
ಡೆಂಗ್ಯೂ ಜ್ವರದಲ್ಲಿ ಹೆಚ್ಚಳ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಜನರು ತಮ್ಮ ಮನೆಯ ಪರಿಸರವನ್ನು ಸ್ವಚ್ಫವಾಗಿಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ನಗರ ಪ್ರದೇಶಗಳ ಜೊತೆ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಡೆಂಗ್ಯೂ ಜ್ವರ ವ್ಯಾಪಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರಕ್ಕೆ ಉತ್ತಮ ಚಿಕಿತ್ಸೆ ಲಭ್ಯವಿದೆ.