ಬೆಂಗಳೂರು: ಮೈಸೂರಿನ ಬಾಬುನಾಯ್ಕ್ ಅವರು ತಮ್ಮ ಮಲೈಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ‘ಸ್ವಪ್ನಮಂಟಪ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಬರಗೂರು ರಾಮಚಂದ್ರಪ್ಪನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದಾರೆ.
‘ಸ್ವಪ್ನಮಂಟಪ’ ಚಿತ್ರವು ಈಗಾಗಲೇ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸಗಳನ್ನು ಮುಗಿಸಿದೆ. ಕನಕಪುರ ರಸ್ತೆಯ ಒಂದು ಹಳ್ಳಿಯಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಹೊಸಮನೆ ಮೂರ್ತಿಯವರು ಈ ಸೆಟ್ ನಿರ್ಮಾಣ ಮಾಡಿದ್ದಾರೆ.
‘ಸ್ವಪ್ನಮಂಟಪ’ ಚಿತ್ರವು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವ ಕಥಾವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ , ಕಥಾನಾಯಕ ಮತ್ತು ನಾಯಕಿ ಜನರನ್ನು ಸಂಘಟಿಸಿ ಸ್ವಪ್ನಮಂಟಪವನ್ನು ಉಳಿಸಿ ಸರ್ಕಾರದ ಅಧಿಕೃತ ಸ್ಮಾರಕದ ಪಟ್ಟಿಗೆ ಸೇರಿಸುವ ಮೂಲಕ ಚಾರಿತ್ರಿಕ ಸ್ಮಾರಕಗಳ ಪರಂಪರೆಯನ್ನು ಎತ್ತಿ ಹಿಡಿಯುತ್ತಾರೆ. ಈ ಸಾಮಾಜಿಕ ಚಿತ್ರದಲ್ಲಿ ಸ್ವಪ್ನಮಂಟಪವನ್ನು ನಿರ್ಮಾಣ ಮಾಡಿದ ರಾಜ-ರಾಣಿ ಯರ ಕಥನವನ್ನೂ ಹಿನ್ನೋಟ ತಂತ್ರದಲ್ಲಿ ಸೇರಿಸಿರುವುದು ಒಂದು ವಿಶೇಷ.
ನಾಯಕ ಮತ್ತು ನಾಯಕಿಯ ಪಾತ್ರದಲ್ಲಿ ಕ್ರಮವಾಗಿ ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇವರಿಬ್ಬರೂ ದ್ವಿಪಾತ್ರಗಳಲ್ಲಿ ಅಭಿನಯಿಸಿರುವುದು ಸಿನಿಮಾದ ಒಂದು ವಿಶೇಷ. ಜೊತೆಗೆ ಸುಂದರರಾಜ್, ಶೋಭಾರಾಘವೇಂದ್ರ, ರಜನಿ, ಮಹಾಲಕ್ಷ್ಮೀ, ಸುಂದರರಾಜ ಅರಸು, ರಾಜಪ್ಪದಳವಾಯಿ, ಅಂಬರೀಶ ಸಾರಂಗಿ, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ವೆಂಕಟರಾಜು, ಶಿವಲಿಂಗಪ್ರಸಾದ್, ಭಾರತಿರಮೇಶ್, ಗುಂಡಿ ರಮೇಶ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ಬಾಬುನಾಯ್ಕ್ ನಿರ್ಮಾಣ ಮತ್ತು ಬರಗೂರರ ನಿರ್ದೇಶನದ ಈ ಚಿತ್ರವು ನಾಗರಾಜ ಆದವಾನಿ ಛಾಯಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ತ್ರಿಭುವನ್ ನೃತ್ಯ ಸಂಯೋಜನೆಯನ್ನು ಒಳಗೊಂಡಿದೆ. ನಟರಾಜ್ ಶಿವು ಮತ್ತು ಪ್ರವೀಣ್ ಸಹನಿರ್ದೇಶಕರಾಗಿದ್ದಾರೆ.