HUBBALLI MURDER CASE: ನೇಹಾ, ಅಂಜಲಿ ಹಂತಕರಿಗೆ ಎನ್‌ಕೌಂಟರ್‌ಗೆ ಆಗ್ರಹ: ಹುಬ್ಬಳ್ಳಿಯಲ್ಲಿ ಸರಣಿ ಹತ್ಯೆ ವಿರುದ್ಧ ಆಕ್ರೋಶ ಸ್ಫೋಟ

ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಇಂದು ಹುಬ್ಬಳ್ಳಿ ನಗರದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಬಿಜೆಪಿ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಅಂಜಲಿ ಹತ್ಯೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ನೇಹಾ ಮತ್ತು ಅಂಜಲಿ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ನೇಹಾ ಕೊಲೆ ನಡೆದಾಗ ಪೊಲೀಸರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಪ್ರಚೋದನೆ ಪಡೆದು ಇದೀಗ ಮತ್ತೋರ್ವ ಅಮಾಯಕ ಯುವತಿ ಬಲಿಯಾಗಿದ್ದಾಳೆ ಎಂದು ಶ್ರೀಗಳು ಆರೋಪಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂತಹ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಈ ರೀತಿಯ ಪ್ರಕರಣಗಳಿಗೆ ಕಡಿವಾಣ ಹಾಕಲು ಹಂತಕರಿಗೆ ಎನ್ಕೌಂಟರ್ ಶಿಕ್ಷೆ ನೀಡಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ವೇಳೆ ನೇಹಾ ಪ್ರಕರಣವನ್ನು ರಾಜಕೀಯ ದಾಳವಾಗಿ ಬಳಸಲಾಗಿತ್ತು. ನೇಹಾ ಪ್ರಕರಣದ ಸಂದರ್ಭದಲ್ಲಿ ಉತ್ಸುಕರಾಗಿ ಹೋರಾಟ ಮಾಡಿದವರು ಈಗ ಮಾಯವಾಗಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಟೀಕಿಸಿದ್ದಾರೆ.
ಅಂಜಲಿ ಕುಟುಂಬಕ್ಕೆ ನೆರವು

ಮಠದಿಂದ ಅಂಜಲಿ ಸಹೋದರಿಯರಿಗೆ ಸಹಾಯ ಮಾಡ್ತೇವೆ.ಅವರ ಮದುವೆ ಮಾಡಿಕೊಡೋ ಜವಾಬ್ದಾರಿ ನಮ್ಮದು. ಸರ್ಕಾರವೂ ಅಂಜಲಿ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು.ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.
ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ವಸತಿ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಿಕೊಡಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಮನವಿ ಮಾಡಿದ್ದಾರೆ.
ಪ್ರತಿಭಟನಾ ನಿತರ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶ

ಇದೇ ವೇಳೆ ನೇಹಾ ಹತ್ಯೆ ಬಳಿಕ ಅಂಜಲಿ ಹತ್ಯೆ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ಧುಮುಕಿದೆ. ಹುಬ್ಬಳ್ಳಿಯಲ್ಲಿ ಶಾಸಕ ಟೆಂಗಿನಕಾಯಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ರಾಜ್ಯ ಸರ್ಕಾರ ಆರೋಪಿಗಳ ಬಂಧನಮಾಡುವ ಬದಲಾಗಿ ಪ್ರತಿಭಟನಾಕಾರರನ್ನು ಬಂಧಿಸುತ್ತಿದೆ ಎಂದು ಶಾಸಕ ಟೆಂಗಿನಕಾಯಿ ಆರೋಪಿಸಿದರು. ಆರೋಪಿಯನ್ನು ಗಲ್ಲಿಗೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಬೊಮ್ಮಾಯಿ, ಶೆಟ್ಟರ್ ಖಂಡನೆ

ಇನ್ನೊಂದೆಡೆ ಬಿಜೆಪಿ ಅಗ್ರ ನಾಯಕರು ಅಂಜಲಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಹುಬ್ಬಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದರು. ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
ಪ್ರಕರಣ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್ ರಕ್ಷಣೆಗೆ ಮನವಿ ಮಾಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ್ ಹೊಣೆಯಾಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ನೇಹಾ ಹತ್ಯೆ ಮುಗಿದ ಬಳಿಕ ಪ್ರತಿಪಕ್ಷ ಬಿಜೆಪಿಗೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಇದೀಗ ಹೊಸ ಅಸ್ತ್ರ ಸಿಕ್ಕಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದನ್ನು ಬಿಂಬಿಸಲು ಬಿಜೆಪಿ ಈ ಕೃತ್ಯವನ್ನು ಬಳಸಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವ ಸಾಧ್ಯತೆ ಹೆಚ್ಚಿದೆ.

More News

You cannot copy content of this page