ಬೆಂಗಳೂರು: ಹಾಸನದಲ್ಲಿ ನಾಲ್ಕು ಮಕ್ಕಳು ನೀರುಪಾಲದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಈಜಲು ಹೋಗಿದ್ದ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ದುರಂತ ಸಂಭವಿಸಿದೆ.
ಬಂಡೆಯ ಮೇಲಿನ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಮೃತಪಟ್ಟ ಬಾಲಕರನ್ನು ಶಾಬಾಜ್ (14) ಸುಲ್ತಾನ್ (13) ರಿಹಾನ್ ಖಾನ್ ((16) ಎಂದು ಗುರುತಿಸಲಾಗಿದೆ. ಶಾಬಾಜ್ ಹಾಗೂ ರಿಯಾನ್ ಖಾನ್ ಸಹೋದರರಾಗಿದ್ದಾರೆ.ಮೃತರೆಲ್ಲರೂ ರಾಮನಗರ ಟೌನ್ ನ ಸುಲ್ತಾನ್ ನಗರದ ನಿವಾಸಿಗಳಾಗಿದ್ದಾರೆ.

ರಾಮನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇದೀಗ ಅಗ್ನಿಶಾಮಕ ದಳ ಮೃತದೇಹಗಳನ್ನು ಹೊರತೆಗೆದಿದೆ. ಎಂಟು ಮಂದಿಯ ತಂಡ ಕೆರೆಗೆ ಈಜಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ದೊಣ್ಣೆಯಿಂದ ಹೊಡೆದು ಬಾಲಕನ ಕೊಲೆ
ಇದೇ ವೇಳೆ ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ಬಯಲು ಶೌಚಾಲಯಕ್ಕೆ ತೆರಳಿದ್ದ ಬಾಲಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಸರ್ಜಾಪುರ ಸಮೀಪದ ನೆರಿಗಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಹತ್ಯೆಗೀಡಾದ ಬಾಲಕನನ್ನು ಪ್ರಾಣೇಶ್(15) ಎಂದು ಗುರುತಿಸಲಾಗಿದೆ. ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆಮಾಡಲಾಗಿದೆ.
ಬೇಸಿಗೆ ರಜೆಗೆ ತಂದೆ- ತಾಯಿ ಬಳಿಗೆ ಪ್ರಾಣೇಶ್ ಬಂದಿದ್ದ.ಮೂಲತಃ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಗೆ ಸೇರಿದ ಮಂತ್ರಾಲಯದ ನಿವಾಸಿಗಳಾಗಿದ್ದಾರೆ. ತಂದೆ ತಾಯಿ ಕಳೆದ ಮೂರು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿದ್ದರು
ಸರ್ಜಾಪುರ ಪೂಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲುಮಾಡಲಾಗಿದೆ.

ಪೊಲೀಸರ ಬಸ್ ಕಳ್ಳತನಕ್ಕೆ ಯತ್ನ
ಪೊಲೀಸರ ಬಸ್ ಕದಿಯಲು ವಿಫಲ ಯತ್ನ ನಡೆದಿದೆ. ಅದೂ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಈ ಘಟನೆ ಸಂಭವಿಸಿದೆ. ಕಲಬುರಗಿ ಪೊಲೀಸ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ಬಸ್‌ನ್ನು ದುಷ್ಕರ್ಮಿಯೊಬ್ಬ ಮದ್ಯದ ಅಮಲಿನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ. ಛತ್ತಿಸ್‌ಘಡ ಮೂಲದ ಸೋನು ಭಗಿರಥ ಮದ್ಯದ ಅಮಲಿನಲ್ಲಿ ಬಸ್ ಅಪಹರಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಲಬುರಗಿಯಲ್ಲಿ ಆರೋಪಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಪೊಲೀಸ್ ಕಾನ್‌ಸ್ಟೇಬಲ್ ರೊಬ್ಬರು ತಮ್ಮ ಶರ್ಟ್ ಬಸ್‌ನ ಕಿಟಕಿಯಲ್ಲಿ ನೇತು ಹಾಕಿದ್ದರು. ಅದರಲ್ಲಿ ಬಸ್ ನ ಕೀ ಇತ್ತು ಎಂದು ಹೇಳಲಾಗಿದೆ. ಕೀ ತೆಗೆದುಕೊಂಡ ಆರೋಪಿ ಬಸ್ ಚಲಾಯಿಸಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.
ತಕ್ಷಣ ಆರೋಪಿ ಸೋನು ಭಗೀರಥ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.