Kajal Aggarwal: ವಿಷ್ಣು ಮಂಚು “ಕಣ್ಣಪ್ಪ” ಚಿತ್ರಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್; ಪಾತ್ರ ಏನಿರಬಹುದು?

ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ತೆಲುಗಿನ ಕಣ್ಣಪ್ಪ ಸಿನಿಮಾ. ಆಗೊಬ್ಬರು ಈಗೊಬ್ಬರು ಈ ಚಿತ್ರದ ತಾರಾಬಳಗ ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೋರ್ವ ಸ್ಟಾರ್‌ ಈ ತಂಡ ಸೇರಿಕೊಂಡಿದ್ದಾರೆ. ಅದು ಬೇರಾರು ಅಲ್ಲ, ನಟಿ ಕಾಜಲ್‌ ಅಗರ್‌ವಾಲ್! ವಿಷ್ಣು ಮಂಚು ಮತ್ತು ಕಾಜಲ್ ಅಗರ್ವಾಲ್ ಈ ಹಿಂದೆ ತೆಲುಗಿನ ಮೊಸಗಲ್ಲು ಚಿತ್ರದಲ್ಲಿ ಸಹೋದರ ಮತ್ತು ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಿಷ್ಣು ಮಂಚು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್‌ ಕಣ್ಣಪ್ಪ ಚಿತ್ರಕ್ಕೂ ಆಗಮಿಸುವ ಮೂಲಕ ಎರಡನೇ ಸಲ ಒಂದಾಗುತ್ತಿದ್ದಾರೆ.

ಹಾಗಾದರೆ, ಕಾಜಲ್‌ ಅಗರ್‌ವಾಲ್‌ ಪಾತ್ರವೇನು? ಸದ್ಯಕ್ಕೆ ಆ ಬಗ್ಗೆ ಚಿತ್ರತಂಡ ರಿವೀಲ್‌ ಮಾಡಿಲ್ಲ. ಬದಲಿಗೆ ವಿಶೇಷವಾದ ಪಾತ್ರವೊಂದರಲ್ಲಿ ಕಾಜಲ್‌ ನಟಿಸುವ ಮೂಲಕ ಕಣ್ಣಪ್ಪ ಸಿನಿಮಾದ ಭಾಗವಾಗಲಿದ್ದಾರೆ. ನೂರಾರು ಕೋಟಿ ಬಜೆಟ್‌ನಲ್ಲಿ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್‌ ಸಹ ಅಷ್ಟೇ ಬಿರುಸಾಗಿಯೇ ನಡೆಯುತ್ತಿದೆ.

ಈ ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ಬಹು ತಾರಾಗಣವೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಸಹ ಈ ಚಿತ್ರದ ಮೂಲಕ ಸೌತ್‌ ಕಡೆಗೆ ವಾಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡರು. ಈಗ ಕಾಜಲ್‌ ಅಗರ್‌ವಾಲ್‌ ಸರದಿ.

ಮೋಹನ್ ಬಾಬು ನಿರ್ಮಿಸುತ್ತಿರುವ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ. ಅದೇ ರೀತಿ ಚಿತ್ರೀಕರಣದ ಮುಕ್ತಾಯದ ಹಂತಕ್ಕೂ ಬಂದು ನಿಂತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ.

More News

You cannot copy content of this page