ಸಿಂಗಾಪುರ: ಜಾಗತಿಕ ಮಟ್ಟದಲ್ಲಿ ಎರಡು ವರ್ಷಗಳ ಹಿಂದೆ ಭಾರಿ ಕೋಲಾಹಲ ಎಬ್ಬಿಸಿದ್ದ ಕೊರೋನಾ ಸೋಂಕು ಮತ್ತೆ ರಿ ಎಂಟ್ರಿ ಕೊಟ್ಟಿದೆ. ಸಿಂಗಾಪುರದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಕೊರೋನಾದ ಉಪ ತಳಿ ಒಮ್ರಿಕಾನ್ ಉಪಟಳ ಹೆಚ್ಚಾಗಿದೆ. ಕಳೆದ ಹಲವು ವಾರಗಳಿಂದ ಕೊರೋನಾ ಸೋಂಕಿನ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಮೇ5ರಿಂದ 11ರ ಅವಧಿಯಲ್ಲಿ ಒಮಿಕ್ರಾನ್ ಉಪತಳಿ ಕೆಪಿ-1 ಮತ್ತು ಕೆಪಿ-2 ಸೋಂಕಿನ ಪ್ರಮಾಣ ವ್ಯಾಪಕವಾಗಿ ಹರಡಿದೆ. 25,900ಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಮತ್ತೆ ಮಾಸ್ಕ್ ಮೊರೆ ಹೋಗಿದ್ದಾರೆ. ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಕೊರೋನಾ ಸೋಂಕು ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಸೋಂಕು ಚೀನಾ ತವರು

ಚೀನಾದ ವುಹಾನ್ ಪ್ರಾಂತ್ಯ ಮಾರಕ ಕೊರೋನಾ ಸೋಂಕಿನ ತವರೂರು ಎಂಬ ಕುಖ್ಯಾತಿಗೆ ಒಳಗಾಗಿದೆ. ಕೊರೋನಾ ವೈರಸ್ ಎಲ್ಲಿ ಯಾವಾಗ ಸೃಷ್ಟಿಯಾಯಿತು ಎಂಬ ಬಗ್ಗೆ ಈಗಲೂ ಗೊಂದಲ ಮುಂದುವರಿದೆ. ಚೀನಾದ ಪ್ರಯೋಗಾಲಯದಲ್ಲಿ ಕೊರೋನಾ ವೈರಸ್ ಮೊದಲು ಸೃಷ್ಟಿಯಾಯಿತು ಎಂಬ ವರದಿಗಳಿವೆ. ಚೀನಾದ ಕೆಲವು ವಿಜ್ಞಾನಿಗಳು ಈ ಸಂಬಂಧ ಹೇಳಿಕೆ ಕೂಡ ನೀಡಿದ್ದರು. ಅಂತಾರಾಷ್ಟ್ರೀಯ ಸಂಸ್ಥೆಗಳು ಕೂಡ ಚೀನಾ ನಡೆಯನ್ನು ಸಂಶಯದಿಂದ ನೋಡಿದ್ದವು. ಆದರೆ ಎಲ್ಲ ಆರೋಪಗಳನ್ನು ಚೀನಾ ತಳ್ಳಿಹಾಕಿತ್ತು. ಕೊರೋನಾ ಸೃಷ್ಟಿಯಲ್ಲಿ ನನ್ನ ಕೈವಾಡ ಇಲ್ಲವೇ ಇಲ್ಲ ಎಂದು ಚೀನಾ ವಾದಿಸಿತ್ತು. ಕೊರೋನಾ ಸ್ಫೋಟಗೊಂಡು ನಾಲ್ಕು ತಿಂಗಳ ಬಳಿಕ ಈ ಮಹಾಮಾರಿಯ ವಿಚಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಯಿತು. ಅಲ್ಲಿಯ ತನಕ ಚೀನಾ ಈ ಮಾಹಿತಿ ರಹಸ್ಯವಾಗಿ ಇಟ್ಟಿತ್ತು.

ವಿಶ್ವದ 150ಕ್ಕೂ ಹೆಚ್ಚು ರಾಷ್ಟ್ರಗಳಿೆಗೆ ಅಪಾಯ
ಚೀನಾದಲ್ಲಿ ಆರಂಭವಾದ ಕೊರೋನಾ ಮಹಾಮಾರಿ ಹಂತ ಹಂತವಾಗಿ ವಿಶ್ವದ ಬಹುತೇಕ ರಾಷ್ಟ್ರಗಳನ್ನು ತನ್ನ ಕಬಂಧ ಬಾಹುವಿಗೆ ಸೆಳೆದಿತ್ತು. ಕೊರೋನಾದಿಂದ ತತ್ತರಿಸದ್ದ ದೇಶಗಳೇ ಇಲ್ಲ. ವಿಶ್ವದ ದೊಡ್ಡಣ್ಣ ಅಮೆರಿಕದಿಂದ ಹಿಡಿದು ತಾಲಿಬಾನ್ ವಶದಲ್ಲಿರುವ ಅಪಘ್ವಾನಿಸ್ತಾನದಲ್ಲಿ ಕೂಡ ಕೊರೋನಾ ಕೇಕೆ ಹಾಕಿ ಗಹಗಹಿಸಿ ನಕ್ಕಿತ್ತು. ಅಮಾಯಕ ಜೀವಗಳು ಕೊರೋನಾ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದವು. ವಿಶ್ವದಲ್ಲಿ ಕೊರೋನಾ ಸೋಂಕಿನಿಂದ ಅಂದಾಜು 1 ಕೋಟಿ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಭಾರತದಲ್ಲಿ ಸುಮಾರು 5 ಲಕ್ಷ ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಾಜಕೀಯ ನಾಯಕರು, ಚಿತ್ರ ತಾರೆಯರು, ವೈದ್ಯರು ಸೇರಿದ್ದಾರೆೆ.
ಭಾರತದ ಮಾದರಿ ಸೇವೆ
ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ಸೋಂಕಿಗೆ ತುತ್ತಾಗಿ ನಲುಗುತ್ತಿರುವಾಗ ಭಾರತ ವಸುಧೈವಂ ಕುಟುಂಬಕಂ ಎಂಬ ನೀತಿಯನ್ನು ಪಾಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಾರತ ತಾನು ಅಭಿವೃದ್ಧಿಪಡಿಸಿದ ಕೊರೋನಾ ತಡೆ ಲಸಿಕೆಯನ್ನು ವಿಶ್ವದ ಹಲವು ಬಡ ರಾಷ್ಟ್ರಗಳಿಗೆ ಉಚಿತವಾಗಿ ನೀಡಿ ಲಕ್ಷಾಂತರ ಮಂದಿಯ ಪ್ರಾಣ ಉಳಿಸಿತ್ತು. ಅಪ್ಘಾನಿಸ್ತಾನಕ್ಕೆ ಕೂಡ ಭಾರತ ಕೊರೋನಾ ಲಸಿಕೆಯನ್ನು ಕಳುಹಿಸಿಕೊಟ್ಟಿತ್ತು.

ಅಡ್ಡಪರಿಣಾಮದ ಆತಂಕ
ಕೊರೋನಾ ಸೋಂಕು ವಿಶ್ವದಲ್ಲಿ ಕಡಿಮೆಯಾದ ಬಳಿಕ ಕೊರೋನಾ ಅವಧಿಯಲ್ಲಿ ತೆಗೆದುಕೊಳ್ಳಲಾದ ಲಸಿಕೆ ಕುರಿತಂತೆ ಮತ್ತೆ ಚರ್ಚೆ ಆರಂಭವಾಗಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳು ಅಡ್ಡಪರಿಣಾಮ ಬೀರಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಕೆಲವು ಸಂಶೋಧನಾ ವರದಿಗಳ ಆಧಾರದಲ್ಲಿ ಈ ಅಭಿಪ್ರಾಯ ಮಂಡಿಸಲಾಗಿದೆ. ಆದರೆ ಒಂದು ಮಾತ್ರ ಸಾಧ್ಯ. ಭಾರತದಂತಹ ದೇಶದಲ್ಲಿ ಕೋಟ್ಯಾಂತರ ಮಂದಿಯ ಪ್ರಾಣವನ್ನು ಕೊರೋನಾ ತಡೆ ಲಸಿಕೆ ಆ ವೇಳೆ ರಕ್ಷಿಸಿದೆ. ಇದನ್ನು ಯಾರೂ ಮರೆಯುವಂತಿಲ್ಲ. ಕೊರೋನಾ ಲಸಿಕೆಯಲ್ಲಿ ಏನಾದರೂ ಲೋಪದೋಷಗಳಿದ್ದರೆ ಅವುಗಳನ್ನು ಸೂಕ್ತ ಸಂಶೋಧನೆಯ ಮೂಲಕ ಪತ್ತೆ ಹಚ್ಚಬೇಕಾಗಿದೆ. ಅನಗತ್ಯ ಗೊಂದಲದಿಂದ ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿಯಾಗುತ್ತದೆ ಹೊರತಾಗಿ ಇನ್ನು ಯಾವುದೇ ಪ್ರಯೋಜನವಾಗುವುದಿಲ್ಲ,