ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನಾಳೆ ಮೇ 20ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಸಾಮಾನ್ಯವಾಗಿ ಹೊಸ ಸರ್ಕಾರಕ್ಕೆ ಮೊದಲ ಆರು ತಿಂಗಳು ಹನಿಮೂನ್ ಅವಧಿ. ಸರ್ಕಾರ ಟೇಕಾಫ್ ಆಗಲು ಸಮಯ ಬೇಕು. ಅದಕ್ಕಾಗಿ ಕಾಯೋಣ ಎಂಬುದು ಪ್ರತಿಪಕ್ಷಗಳ ನಿಲುವು. ಇದೀಗ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷಗಳು ಕೂಡ ಸಜ್ಜಾಗಿವೆ
ಗ್ಯಾರಂಟಿ ಯೋಜನೆಗಳ ಅಬ್ಬರ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತಕ್ಕಿಂತ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ಬಳಸಿದ ಟ್ರಂಪ್ ಕಾರ್ಡ್ ಐದು ಗ್ಯಾರಂಟಿ ಯೋಜನೆಗಳು ಭಾರೀ ಸದ್ದು ಮಾಡಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ಇತರ ರಾಜ್ಯಗಳಲ್ಲಿ ಕೂಡ ಗ್ಯಾರಂಟಿ ಯೋಜನೆಗಳು ಕಂಪನ ಸೃಷ್ಟಿಸಿವೆ ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಕೂಡ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಯತ್ನ ನಡೆಸಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ನಡೆಸಿದ್ದ ಯತ್ನಕ್ಕೆ ಫಲ ಕೂಡ ದೊರೆತಿದೆ. ಬಿಆರ್‌ಎಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಕಾಂಗ್ರೆಸ್ ಘೋಷಿಸಿದ್ದ ಉಚಿತ ಕೊಡುಗೆ ಯೋಜನೆಗಳು ನೆರವಿಗೆ ಬಂದಿದ್ದವು.
ಮಧ್ಯಪ್ರದೇಶ, ರಾಜಸ್ತಾನದಲ್ಲಿ ಮಾತ್ರ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಫಲ ನೀಡಲಿಲ್ಲ. ಬಿಜೆಪಿ ತಂತ್ರಗಾರಿಕೆ ಎದುರು ಕಾಂಗ್ರೆಸ್ ಅಲ್ಲಿ ಮಂಕಾಗಿತ್ತು.

ಕೇಂದ್ರದ ವಿರುದ್ಧ ಸಂಘರ್ಪ, ಪ್ರತಿಭಟನೆ
ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಬರ ಕೂಡ ಹಿಂಬಾಲಿಸಿಕೊಂಡು ಬಂತು. ಮಳೆಯ ಕೊರತೆಯಿಂದ ರಾಜ್ಯದ ಬಹುತೇಕ ತಾಲೂಕುಗಳನ್ನು ರಾಜ್ಯ ಸರ್ಕಾರ ಬರ ಪೀಡಿತ ತಾಲೂಕು ಎಂದು ಘೋಷಿಸಿ ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಆರಂಭದಲ್ಲಿ ಕೇವಲ ಬಾಯಿ ಮಾತಿನ ಭರವಸೆ ಮಾತ್ರ ನೀಡಿತ್ತು. ಯಾವುದೇ ಹಣ ರಾಜ್ಯಕ್ಕೆ ನೀಡಿರಲಿಲ್ಲ. ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಸಹನೆ ಪರೀಕ್ಷಿಸುವ ಹಂತಕ್ಕೆ ಕೂಡ ಹೋಗಿತ್ತು.
ಕೇಂದ್ರ ಸರ್ಕಾರದ ಬರ ಪರಿಹಾರ ವಿಳಂಬ ಧೋರಣೆ ಖಂಡಿಸಿ ದೆಹಲಿಯ ಜಂತರ್ ಮಂಥರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಎಲ್ಲ ಸದಸ್ಯರು ಭಾಗವಹಿಸಿದ್ದರು. ಕೇಂದ್ರಕ್ಕೆ ರಾಜ್ಯದಿಂದ ಅತ್ಯಧಿಕ ಆದಾಯ ತೆರಿಗೆ ರೂಪದಲ್ಲಿ ಹೋಗುತ್ತಿದ್ದರೂ ರಾಜ್ಯದ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಹೊರಿಸಿದರು.
ಪ್ರತಿಭಟನೆ ಅಸ್ತ್ರಕ್ಕೆ ಕೇಂದ್ರ ಸರ್ಕಾರ ಮಣಿಯದಿದ್ದಾಗ ಸಿದ್ದರಾಮಯ್ಯ ಅಂತಿಮವಾಗಿ ಸುಪ್ರೀಂಕೋರ್ಟ್ ಮೊರೆ ಹೋದರು. ಕೇಂದ್ರ ಸರ್ಕಾರದ ವಿರುದ್ದ ದಾವೆ ಹೂಡಿದರು. ಕೇಂದ್ರದ ಕ್ರಮ ಪ್ರಶ್ನಿಸಿದರು. ಕೇಂದ್ರ ಮತ್ತು ರಾಜ್ಯದ ಮಧ್ಯೆ ಸಂಘರ್ಷ ಬೇಡ, ಸಹಕಾರ ಇರಲಿ ಎಂದು ಸುಪ್ರೀಂಕೋರ್ಟ್ ಈ ವೇಳ ೆ ಸಲಹೆ ನೀಡಿತ್ತು.
ವಿಚಾರಣೆ ವೇಳೆ ರಾಜ್ಯದ ಮನವಿಯನ್ನು ಕಾಲಮಿತಿಯೊಳಗೆ ಪರಿಗಣಿಸುವುದಾಗಿ ಕೇಂದ್ರ ಸುಪ್ರೀಂಕೋರ್ಟ್‌ಗೆ ಭರವಸೆ ನೀಡಿತ್ತು.
ಅದರಂತೆ ಕೇಂದ್ರ ಸರ್ಕಾರ 3000 ಕೋಟಿ ರೂ. ಗಳನ್ನು ನೆರೆ ಪರಿಹಾರ ರೂಪದಲ್ಲಿ ಬಿಡುಗಡೆ ಮಾಡಿತ್ತು. ಈ ಮೊತ್ತಕ್ಕೆ ಅಪಸ್ವರ ಎತ್ತಿರುವ ರಾಜ್ಯ ಸರ್ಕಾರ ಇದು ಅತ್ಯಲ್ಪ ಮೊತ್ತವಾಗಿದೆ ಎಂದು ಹೇಳಿ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಲೋಕಸಭೆ ಚುನಾವಣೆ ಕದನ

ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಇದೀಗ ಲೋಕಸಭೆ ಚುನಾವಣೆ ಕೂಡ ರಾಜ್ಯದಲ್ಲಿ ನಡೆದಿದೆ. ಫಲಿತಾಂಶ ಇನ್ನಷ್ಟೇ ಹೊರಬರಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ 20 ಕ್ಷೇತ್ರಗಳ ಟಾರ್ಗೆಟ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರಿಗೆ ಹೊಣೆಗಾರಿಕೆ ಹಂಚಿದ್ದಾರೆ. ಗೆದ್ದರೆ ಸಚಿವ ಸ್ಥಾನದಲ್ಲಿ ಮುಂದುವರಿಕೆ ಸೋತರೆ ಪದಚ್ಯುತಿ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ಸಚಿವರ ಸಂಬಂಧಿಕರು, ಮಗ, ಮಗಳಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ತಿರುಗೇಟು ನೀಡುವ ಪ್ರಯತ್ನ ಕೂಡ ಮಾಡಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಜೂನ್ 4ರಂದು ಉತ್ತರ ದೊರೆಯಲಿದೆ.
ರಾಜ್ಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆರೋಪ- ಬಿಜೆಪಿ ದಾಳಿ

ಹುಬ್ಬಳ್ಲಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಸರ್ಕಾರ ಎದುರಿಸಿರುವ ಅತ್ಯಂತ ದೊಡ್ಡ ಕಾನೂನು ಸುವ್ಯವಸ್ಥೆ ಸವಾಲಾಗಿದೆ. ರಾಜ್ಯದಲ್ಲಿ ಎರಡನೆ ಹಂತದ ಲೋಕಸಭೆ ಚುನಾವಣೆಗೆ ಬೆರಳೆಣಿಕೆಯ ದಿನ ಇರುವಂತೆಯೇ ನಡೆದ ಹತ್ಯೆ ಎಲ್ಲರನ್ನು ನಿಬ್ಬೆರಗುಗೊಳಿಸಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಖಂಡಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವ್ಯಾಪಕ ಜನಾಂದೋಲನ ನಡೆಸಿದ್ದವು. ಪ್ರತಿಭಟನೆ ನಡೆದಿದ್ದವು. ಸರ್ಕಾರಕ್ಕೂ ಇದು ತಲೆ ನೋವಾಗಿ ಪರಿಣಮಿಸಿತ್ತು. ಅಂತಿಮವಾಗಿ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.
ನೇಹಾ ಹಿರೇಮಠ್ ಹತ್ಯೆಯ ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಪ್ರಕರಣ ಸರ್ಕಾರಕ್ಕೆ ಮತ್ತೊಂದು ತಲೆ ನೋವಿನ ವಿಷಯವಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಸರ್ಕಾರ ಈ ಸಂಬಂಧ ಸಮಗ್ರ ತನಿಖೆಗೆ ಸೂಚಿಸಿದೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್
ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಮುಗಿಲು ಮುಟ್ಟಿದ ವೇಳೆ ಪ್ರಜ್ವಲ್ ರೇವಣ್ಣ ವಿರುದ್ದದ ಅಶ್ಲೀಲ ವಿಡಿಯೋ ಕೇಸ್ ಸದ್ದು ಮಾಡಿತ್ತು. ಇದನ್ನು ಪರಿಣಾಮಕಾರಿ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಎಲ್ಲ ತಂತ್ರ ಬಳಸಿಕೊಂಡಿದೆ ಎಂದು ಹೇಳಲಾಗಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಬೆಳಕಿಗೆ ಬಂದ ಬಳಿಕ ನೇಹಾ ಹಿರೇಮಠ್ ಹೋರಾಟ ಸ್ವಾಭಾವಿಕವಾಗಿ ತಣ್ಣಗಾಯಿತು. ಮಾಜಿ ಸಚಿವ ರೇವಣ್ಣ ಬಂಧನವೂ ಕೂಡ ನಡೆದು ಹೋಯಿತ್ತು. ಇದೀಗ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನಾಳೆ ಜಾಮೀನು ಅರ್ಜಿಯ ಮುಂದುವರಿದ ವಿಚಾರಣೆ ನಡೆಯಲಿದೆ. ಅವರ ಪುತ್ರ ಪ್ರಜ್ವಲ್ ಕಳೆದ 23 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಪ್ರಜ್ವಲ್ ಬಂಧನಕ್ಕೆ ಎಸ್ಐಟಿ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಇದುವರೆಗೆ ಫಲ ನೀಡಿಲ್ಲ