HD KUMARASWAMY: ರಾಜ್ಯದಲ್ಲಿ ನನ್ನ ಫೋನ್ ಕದ್ದಾಲಿಸಲಾಗುತ್ತಿದೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ಹಾಸನದ ಪೆನ್ ಡ್ರೈವ್ ವಿಚಾರ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಅತ್ಯಂತ ತೀವ್ರ ಸ್ವರೂಪದ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜೆ ಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಸರ್ಕಾರದ ಸಾಧನೆಯನ್ನು ಪ್ರಶ್ನೆ ಮಾಡುತ್ತಾ ಹಾಸನದ ಪೆನ್ ಡ್ರೈವ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ನನ್ನ ಮತ್ತು ದೇವೇಗೌಡರ ಇತರ ಕುಟುಂಬ ಸದಸ್ಯರ ಫೋನ್ ಕದ್ದಾಲಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕೂಡ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ. ಸಿಡಿ ಶಿವು ಎಂದು ಪರೋಕ್ಷವಾಗಿ ಪ್ರಸ್ತಾಪಿಸುವ ಮೂಲಕ ಡಿ ಕೆ ಶಿವಕುಮಾರ್ ಅವರನ್ನು ಟೀಕಿಸಿದ್ದಾರೆ.
ವಕೀಲ ದೇವರಾಜೇಗೌಡ ಪೆನ್ ಡ್ರೈವ್ ವಿವಾದಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಅವರು ಏನು ಹೇಳಿದ್ದಾರೆ ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಲು ಮಿನಿ ಕ್ಯಾಬಿನೆಟ್ ಕೂಡ ರಚಿಸಲಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣಗೆ ಮನವಿ
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ತಕ್ಷಣ ಭಾರತಕ್ಕೆ ಮರಳುವಂತೆ ಕುಮಾರಸ್ವಾಮಿ ಮನವಿಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಭಾವನಾತ್ಮಕವಾಗಿ ಈ ಮನವಿ ಮಾಡಿದ್ದಾರೆ. ಕುಟುಂಬದ ಮತ್ತು ಕಾರ್ಯಕರ್ತರ ಗೌರವ ಕಾಪಾಡಲು ತಕ್ಷಣ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಸ್ವದೇಶಕ್ಕೆ ಮರಳುವಂತೆ ಕುಮಾರಸ್ವಾಮಿ ಮನವಿಮಾಡಿದ್ದಾರೆ. ಇಡೀ ಪ್ರಕರಣದಿಂದ ದೇವೇಗೌಡರು ಭಾರಿ ನೊಂದು ಹೋಗಿದ್ದಾರೆ. ರಾಜ್ಯಸಭಾ ಸ್ಥಾನಕ್ಕೂ ರಾಜೀನಾಮೆ ನೀಡಲು ಅವರು ಮುಂದಾಗಿದ್ದರು. ಅವರ ಮನವೊಲಿಸಿ ತೀರ್ಮಾನದಿಂದ ಹಿಂದೆ ಸರಿಯುವಂತೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದಿನ 48 ಗಂಟೆಯೊಳಗೆ ಭಾರತಕ್ಕೆ ಬಂದು ವಿಚಾರಣೆ ಎದುರಿಸುವಂತೆ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣಗೆ ಮನವಿ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಕೂಡ ಬೆಳಗ್ಗೆ ಇದೇ ರೀತಿ ಅಪೀಲ್ ಮಾಡಿದ್ದರು.

ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಇದೇ ವೇಳೆ ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರ ಫೋನ್ ಕದ್ದಾಲಿಸಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಮುಟ್ಟಾಳ ಕೆಲಸಕ್ಕೆ ಸರ್ಕಾರ ಮುಂದಾಗುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಫೋನ್ ಕದ್ದಾಲಿಸಲು ಅವರೇನು ಭಯೋತ್ಪಾದಕರೆ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಹೆಚ್ ಡಿ ಕೆ ಮಾಡಿರುವ ಆರೋಪಗಳ ಕುರಿತಂತೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಹಾಸನ ಪೆನ್ ಡ್ರೈವ್ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಜಿಡಿಎಸ್ ನಾಯಕರು ಮತ್ತು ಶಿವರಾಮೇಗೌಡ ಮಧ್ಯೆ ಆರೋಪ ಪ್ರತ್ಯಾರೋಪ ಮುಂದುವರಿದಿದೆ.

More News

You cannot copy content of this page