VIDHANA PARISHAD ELECTIONS: ಎಲ್ಲರೂ ಒಟ್ಟಾಗಿ ಪರಿಷತ್ ಚುನಾವಣೆ ಮಾಡುವಂತೆ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 27: “ಆರು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಶಾಸಕರು, ಸಚಿವರು ಹಾಗೂ ಮುಖಂಡರು ಒಟ್ಟಾಗಿ ಜವಾಬ್ದಾರಿ ತೆಗೆದುಕೊಂಡು ಚುನಾವಣೆ ನಡೆಸುವಂತೆ ಸೂಚನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಪರಿಷತ್ ಚುನಾವಣೆ ಸಂಬಂಧ ಜೂಮ್ ವಿಡಿಯೋ ಸಂವಾದ ಮೂಲಕ ಪಕ್ಷದ ಪದಾಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;

“ನಮ್ಮ ಸರ್ಕಾರ ಪದವೀಧರರ, ಶಿಕ್ಷಕರ ಮತ್ತು ರಾಜ್ಯದ ಪ್ರಗತಿಗೆ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇನೆ. ಶಾಸಕರು, ಸಚಿವರು ಹಾಗೂ ಮುಖಂಡರು ಪಕ್ಷದ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ.”

ಎಸ್ ಐಟಿ ಮುಂದೆ ಶರಣಾಗುತ್ತೇನೆ, ಇದೆಲ್ಲಾ ಕಾಂಗ್ರೆಸ್ ಪಿತೂರಿ ಎಂಬ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಬಗ್ಗೆ ಕೇಳಿದಾಗ, “ಪ್ರಜ್ವಲ್ ರೇವಣ್ಣ ಅವರು ವಿಚಾರಣೆಗೆ ಹಾಜರಾಗದೇ ಬೇರೆ ದಾರಿ ಇಲ್ಲ. ಅವರ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಅವರು ಮಾತನಾಡುತ್ತಾರೆ ಎಂದು ನಾನು ಮಾತನಾಡಲು ಆಗುವುದಿಲ್ಲ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಯಾರ ಬಾಯಿಗೂ ನಾವು ಬೀಗ ಹಾಕಲು ಆಗುವುದಿಲ್ಲ. ಈ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ರಾಹುಲ್ ಗಾಂಧಿ ವಿಚಾರ ಪ್ರಸ್ತಾಪ ಮಾಡಿರುವ ಪ್ರಜ್ವಲ್ ಗೆ ಕಾಲವೇ ಉತ್ತರ ಕೊಡಲಿದೆ” ಎಂದರು.

More News

You cannot copy content of this page