Dasappa Kannada Movie: ಗ್ರಾಮೀಣ ಸೊಗಡಿನ ಚಿತ್ರ “ದಾಸಪ್ಪ” ಚಿತ್ರದ ಟ್ರೇಲರ್ ಬಿಡುಗಡೆ

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ “ತಿಥಿ” ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ನಟ ತಮ್ಮಣ್ಣ ಪ್ರಮುಖಪಾತ್ರದಲ್ಲಿ ನಟಿಸಿರುವ “ದಾಸಪ್ಪ” ಚಿತ್ರದ ಟ್ರೇಲರ್ ಸಿರಿ ಮ್ಯೂಸಿಕ್ ಮೂಲಕ ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್(ಬಹದ್ದೂರ್) ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮಂಡ್ಯ ಜಿಲ್ಲೆಯ ಕೀಲಾರದವನು ಎಂದು ಮಾತನಾಡಿದ ನಿರ್ದೇಶಕ ವಿಜಯ್ ಕೀಲಾರ, “ದಾಸಪ್ಪ” ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಎಲ್ಲಾ ಹಳ್ಳಿಗಳಲ್ಲಿ ಯಾವುದೇ ಕಾರ್ಯವಾದರೂ “ದಾಸಪ್ಪ” ಅವರು ಇರಲೇ ಬೇಕು. ಅಂತಹ ದಾಸಪ್ಪ ಎಂಬ ಪಾತ್ರದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. “ತಿಥಿ” ಚಿತ್ರದ ಸ್ಪೂರ್ತಿಯಿಂದ ಈ ಚಿತ್ರ ಮಾಡಿದ್ದೇನೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ನಾನೇ ಬರೆದಿದ್ದೇನೆ. ಆನಂದ್ ಕೆಂಪೇಗೌಡ ಕೆಬ್ಬಳ್ಳಿ ಈ ಚಿತ್ರದ ನಿರ್ಮಾಪಕರು. ಶ್ರೀನಿವಾಸ್ ಹಾಗೂ ರಾಘವೇಂದ್ರ ಸಹ ನಿರ್ಮಾಪಕರು‌. “ತಿಥಿ” ಖ್ಯಾತಿಯ ನಟ ತಮ್ಮಣ್ಣ ಅವರು “ದಾಸಪ್ಪ”ನಾಗಿ ಅಭಿನಯಿಸಿದ್ದಾರೆ. ಮಂಜು ಪಾವಗಡ, ವಿನೋದ್ ಗೊಬ್ರಗಾಲ, ಅಂಜನ ಗಿರೀಶ್, ಸುರಕ್ಷಿತ ಶೆಟ್ಟಿ, ಸಿಂಚನ ಗೌಡ ಮುಂತಾದವರು ಅಭಿನಯಿಸಿದ್ದಾರೆ. ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳು ಇಲ್ಲದಿರುವುದು ಈ ಚಿತ್ರದ ವಿಶೇಷ. ಮಂಡ್ಯ, ಕೀಲಾರ, ಮದ್ದೂರಿನಲ್ಲಿ ಚಿತ್ರೀಕರಣವಾಗಿದೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು.

“ದಾಸಪ್ಪ” ನ ಪಾತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ ಎಂದ ನಟ ತಮ್ಮಣ್ಣ, ಚಿತ್ರತಂಡದವರಿಗೆ ಧನ್ಯವಾದ ತಿಳಿಸಿದರು.

ನಿರ್ದೇಶಕರು ನನ್ನ ಸ್ನೇಹಿತರು. ಕಥೆ ಕೇಳಿ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ನಿರ್ಮಾಣದ ಜೊತೆಗೆ ಸಣ್ಣ ಪಾತ್ರದಲ್ಲೂ ಕಾಣಿಸಿಕೊಂಡಿರುವುದಾಗಿ ಸಹ ನಿರ್ಮಾಪಕ ಶ್ರೀನಿವಾಸ್ ತಿಳಿಸಿದರು‌. ಮತ್ತೊಬ್ಬ ಸಹ ನಿರ್ಮಾಪಕ ರಾಘವೇಂದ್ರ ಹಾಗೂ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ನಟಿಸಿರುವ ಮಂಜು ಪಾವಗಡ, ವಿನೋದ್ ಗೊಬ್ರಗಾಲ, ಸುರಕ್ಷಿತ, ಸಿಂಚನ ಗೌಡ ಮುಂತಾದವರು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.

More News

You cannot copy content of this page