MLC ELECTIONS: ಪರಿಷತ್ ಚುನಾವಣೆ : 11 ಅಭ್ಯರ್ಥಿ ಗಳಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು : ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ದೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ನ 7, ಬಿಜೆಪಿಯ ಮೂವರು ಹಾಗೂ ಜೆಡಿಎಸ್ ನಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನಸೌಧದ ಮೊದಲ‌ ಮಹಡಿಯಲ್ಲಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.ಜೂ.13ಕ್ಕೆ ಚುನಾವಣೆ ನಡೆಯಲಿದೆ.ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದ್ದು,ಜೂ.6ಕ್ಕೆ ನಾಮಪತ್ರ ವಾಪಾಸು ಪಡೆಯುವ ದಿನವಾಗಿದೆ. ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಸಿಎಂ,ಡಿಸಿಎಂ ಸಮ್ಮುಖದಲ್ಲಿ ಕೈ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ನ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು. ಯತೀಂದ್ರ ಸಿದ್ದರಾಮಯ್ಯ,ಸಚಿವ ಬೋಸರಾಜು, ಕೆ.ಗೋವಿಂದ ರಾಜು, ವಸಂತ ಕುಮಾರ್, ಮಾಜಿ ಎಂಎಲ್‌ಸಿ ಐವಾನ್ ಡಿಸೋಜಾ, ಶಿವಮೊಗ್ಗದ ಬಲ್ಕೀಸ್ ಬಾನು, ಜಗದೇವ್ ಗುತ್ತೇದಾರ್ ನಾಮಪತ್ರ ಸಲ್ಲಿಕೆ ಮಾಡಿದರು.

ಅದಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವಿಧಾನಸೌಧದ ಆಡಳಿತ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಳು ಕೈ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದರು.ಬಳಿಕ ಚುನಾವಣಾಧಿಕಾರಿ ಚೇಂಬರ್ ಗೆ ಆಗಮಿಸಿ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಜೆಡಿಎಸ್ ನಿಂದ ಜವರಾಯಿ ಗೌಡ ನಾಮಪತ್ರ

ಜೆಡಿಎಸ್ ಪಕ್ಷ ಯಶವಂತಪುರ ಜೆಡಿಎಸ್ ಪರಾಜಿತ ಅಭ್ಯರ್ಥಿ ಜವರಾಯಿ ಗೌಡ ಹೆಸರನ್ನು ಅಂತಿಮಗೊಳಿಸಲಾಯಿತು. ಬೆಳಗ್ಗೆ ವಿಧಾನಸೌಧ ಪಕ್ಷದ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಿದರು.ಸಭೆಯಲ್ಲಿ ಅಭ್ಯರ್ಥಿಯಾಗಿ ಜವರಾಯಿ ಗೌಡರನ್ನು ಆಯ್ಕೆ ಮಾಡಲಾಯಿತು.ಬಳಿಕ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಜವರಾಯಿ ಗೌಡ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಮೂವರು ಅಭ್ಯರ್ಥಿಗಳಿಂದ ನಾಮಪತ್ರ

ಬಿಜೆಪಿ ಮೂವರು ಅಭ್ಯರ್ಥಿಗಳಾದ ಸಿ.ಟಿ.ರವಿ, ಎನ್.ರವಿಕುಮಾರ್ ಹಾಗೂ ಎಂ.ಜಿ.ಮುಳೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ,ಸುನೀಲ್ ಕುಮಾರ್ ಸೇರಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಒಟ್ಟು 12 ಮಂದಿ ನಾಮಪತ್ರ ಸಲ್ಲಿಕೆ

ವಿಧಾನಸಭೆಯಿಂದ ಪರಿಷತ್ ಗೆ ನಡೆಯುವ ಚುನಾವಣೆಗೆ ಒಟ್ಟು 12 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಿಂದ 7, ಬಿಜೆಪಿಯಿಂದ 3 ಹಾಗೂ ಜೆಡಿಎಸ್ ನಿಂದ 1 ನಾಮಪತ್ರ ಸಲ್ಲಿಸಿದ್ದಾರೆ. ಮೇ.31ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆಸಿಫ್ ಪಾಷಾ ಆರ್.ಎಂ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಸೂಚಕರಿಲ್ಲದ ಕಾರಣ ಆಸಿಫ್ ಪಾಷಾ ನಾಮಪತ್ರ ತಿರಸ್ಕೃತವಾಗುವ ಸಾದಸ್ಯತೆನೇ ಹೆಚ್ಚು. ಹೀಗಾಗಿ 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತ.

More News

You cannot copy content of this page