LOKSABHA ELECTION RESULTS 2024: ಬೆಂಗಳೂರು ಕೇಂದ್ರ ಕ್ಷೇತ್ರ ಮತ ಎಣಿಕೆ ಕಾರ್ಯ: ಪಿ.ಸಿ. ಮೋಹನ್ V/S ಮನ್ಸೂರ್ ಅಲಿ ಖಾನ್ ಗೆಲ್ಲೋದ್ಯಾರು..?

ಬೆಂಗಳೂರು: ಬೆಂಗಳೂರು ಕೇಂದ್ರ ಕ್ಷೇತ್ರದ ಮತ ಎಣಿಕೆ ಕಾರ್ಯ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಪಿ.ಸಿ.ಮೋಹನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಡುವೆ ಜಿದ್ದಾಜಿದ್ದು ಏರ್ಪಟ್ಟಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿದ್ದು, ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್ ಗಳನ್ನು ಬೆಳಗ್ಗೆ 6 ಗಂಟೆಗೆ ಬರಲು ತಿಳಿಸಲಾಗಿದೆ. ಒಂದು ಕೊಠಡಿಯಲ್ಲಿ 14 ಟೇಬಲ್ ಗಳನ್ನು ಹಾಕಲು ಅವಕಾಶ ಮಾಡಲಾಗಿದೆ.

ಅಂಚೆ ಮತದಾನವು ಈ ಬಾರಿ ಹೆಚ್ಚಾಗಿ ನಡೆದಿರುವುದರಿಂದ ಎಣಿಕೆಯು ನಿರಂತರವಾಗಿ ನಡೆಯುತ್ತಿರುತ್ತದೆ. ಕೊನೆಯ ರೌಂಡ್ ನ ಮುಂಚಿತವಾಗಿ ಅಂಚೆ ಮತದಾನದ ಎಣಿಕೆಯನ್ನು ಮುಗಿಸಲಾಗುತ್ತದೆ. ಅಂಚೆ ಮತದಾನ ಎಣಿಕೆಗಾಗಿ 9 ಟೇಬಲ್ ಗಳನ್ನು ಹಾಕಲಾಗಿದೆ. ಈ ಬಾರಿ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದರ ಜೊತೆಗೆ ಚುನಾವಣಾಧಿಕಾರಿ ನಿರ್ದೇಶನದ ಮೇರೆಗೆ ಇನ್ನಿತರ ಕಡೆ ಸಿಸಿ ಕ್ಯಾಮೆರಾ ಹಾಗೂ ವೀಡಿಯೋಗ್ರಾಫಿ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಗಳ ಎಣಿಕೆ ಪ್ರಾರಂಭವಾದ ಬಳಿಕ ಇ.ವಿ.ಎಂ ಎಣಿಕೆ ಆರಂಭವಾಗಲಿದೆ. ಬೆಂಗಳೂರು ಕೇಂದ್ರದಲ್ಲಿ ಒಟ್ಟು 13,15,612 ಮತ ಚಲಾವಣೆ ಆಗಿದೆ.‌ ಕ್ಷೇತ್ರದಲ್ಲಿ 2,125 ಮತಗಟ್ಟೆಗಳು ಹೊಂದಿದ್ದು, 10 ಮತ ಎಣಿಕೆ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. 8 ವಿಧಾಸಭೆ ಕ್ಷೇತ್ರವಾರು ತಲಾ 14 ಟೇಬಲ್ ನ್ನು ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಮಹದೇವಪುರ ಕ್ಷೇತ್ರಕ್ಕೆ ಎರಡು ಮತ ಎಣಿಕೆ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 28 ಟೇಬಲ್ ಗಳನ್ನು ಹಾಕಲಾಗಿದೆ. ಆ ಮೂಲಕ ಒಟ್ಟು 135 ಮತ ಎಣಿಕೆ ಟೇಬಲ್ ಗಳನ್ನು ಹಾಕಲಾಗಿದೆ. ಒಟ್ಟು 416 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

More News

You cannot copy content of this page