HD KUMARASWAMY: ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ಗ್ಯಾರಂಟಿಗಳೇ ಬೆಲೆ ಏರಿಕೆಗೆ ಮೂಲ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದ್ದರು. ಸಿದ್ದರಾಮಯ್ಯ ಅವರು ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂದು ಹೇಳುತ್ತಿದ್ದಾರೆ ಎಂದು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಹಾರ ನಡೆಸಿದರು.

ನಗರದಲ್ಲಿ ಇಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವತಿಯಿಂದ ನೂತನ ಕೇಂದ್ರ ಸಚಿವರು, ಸಂಸದರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಅದಕ್ಕಾಗಿ ಜನರನ್ನು ದೋಚುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಬೆಳೆಗಳ ಏರಿಕೆಗೆ ಗ್ಯಾರಂಟಿಗಳೇ ಕಾರಣ ಎಂದು ಕೇಂದ್ರ ಸಚಿವರು ದೂರಿದರು.

ಈ ನಾಡಿಗೆ ಕುಮಾರಸ್ವಾಮಿ ಪರಿಚಯ ಆಗಿದ್ದು 2006ರಲ್ಲಿ ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದಾಗ. ನನಗಿಂತ ಹಿರಿಯರಾದ ಯಡಿಯೂರಪ್ಪ ಅವರು ಸಹಕಾರ ನೀಡಿದರು. ಮುಕ್ತವಾಗಿ ಅಧಿಕಾರ ನಡೆಸಲು ಬಿಟ್ಟರು.
ಆದರೆ, ಕೆಲವರ ಕುತಂತ್ರದಿಂದ ಅಧಿಕಾರ ಹಸ್ತಾಂತರ ಆಗಲಿಲ್ಲ. ಅದು ನನ್ನ ತಪ್ಪಲ್ಲ‌. ನಾವು ಆವತ್ತು ಅಧಿಕಾರದಲ್ಲಿ ಮುಂದುವರಿದಿದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ಸಂಪೂರ್ಣ ನೆಲಕಚ್ಚಿ ಹೋಗುತ್ತಿತ್ತು ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ನಮ್ಮದು ಸಹಜ ಮೈತ್ರಿ

ಜೆಡಿಎಸ್ ಬಿಜೆಪಿಯದ್ದು ಸಹಜ ಮೈತ್ರಿ. 2018ರಲ್ಲೂ ನನಗೆ ಬಿಜೆಪಿ ಜತೆ ಸೇರಿಯೇ ಸರ್ಕಾರ ಮಾಡುವ ಆಸಕ್ತಿ ಇತ್ತು. ಈಗ ಮುಕ್ತವಾಗಿ ಎಲ್ಲಾ ವಿಷಯಗಳನ್ನು ಚರ್ಚೆ ಮಾಡುವುದಿಲ್ಲ. ಅದು ಮುಗಿದು ಹೋಗಿರುವ ಪ್ರಸಂಗ. ಆಗಿರುವ ಎಲ್ಲಾ ಕಹಿ ಘಟನೆಗಳನ್ನು ಮರೆಯಬೇಕಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಯಡಿಯೂರಪ್ಪ ಅವರು ಎಲ್ಲೆಡೆ ಓಡಾಟ ಮಾಡಿದ್ದಾರೆ. 82ರ ವಯಸ್ಸಿನಲ್ಲಿಯೂ ಅಭ್ಯರ್ಥಿಗಳ ಗೆಲುವಿಗೆ ಓಡಾಡಿದ್ದಾರೆ. ಅವರಿಗೆ ನಾನು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಕೇಂದ್ರ ಸಚಿವರು.

ಮೈತ್ರಿ ಮುಂದುವರಿಯಲಿದೆ

ಲೋಕಸಭೆ ಚುನಾವಣೆಯಲ್ಲಿ ಮಾಡಿಕೊಂಡ ಮೈತ್ರಿ ಮುಂದುವರಿಯಬೇಕು. ಮೈಸೂರು ಪಾಲಿಕೆ ಚುನಾವಣೆ ಇರಬಹುದು, ಮುಂಬರುವ ಯಾವುದೇ ಚುನಾವಣೆ ಹೊಂದಾಣಿಕೆ ಇರಬಹುದು. ಎರಡೂ ಪಕ್ಷಗಳು ಹೊಂದಾಣಿಕೆಯಿಂದ ಹೋಗಬೇಕಿದೆ. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗೂ ನಾವು ಸಜ್ಜಾಗಬೇಕಿದೆ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.

ನಮ್ಮಲ್ಲಿ ಯಾವುದೇ ಒಡಕು ತರಬಾರದು. ನಮ್ಮಲ್ಲಿ ಯಾರೂ ಹೆಚ್ಚು ಕಡಿಮೆ ಎನ್ನುವ ಪ್ರಶ್ನೆ ಇಲ್ಲ. ಒಂದು ಕುಟುಂಬದ ಅಣ್ಣ ತಮ್ಮಂದಿರ ರೀತಿ ಹೋಗಬೇಕು. ಯಾರೇ ಒಗ್ಗಟ್ಟು ಮುರಿಯಲು ಮುಂದಾದರೆ ಅದನ್ನು ಕಿವಿ ಮೇಲೆ ಹಾಕಿಕೊಳ್ಳಬಾರದು ಎಂದು ಸಚಿವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಪಾಲ್ಗೊಂಡಿದ್ದರು. ಅಲ್ಲದೆ, ಜೆಡಿಎಸ್ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಎಲ್ಲಾ ಸಂಸದರು ಭಾಗಿಯಾಗಿ ಅಭಿನಂದನೆ ಸ್ವೀಕರಿಸಿದರು.

More News

You cannot copy content of this page