ದೆಹಲಿ, ಜೂ.24: ಅಕ್ರಮ ಗಣಿಗಾರಿಕೆಯ ಮೂಲ ಪಕ್ಷ ಯಾವುದೆಂಬುದು ಇಡೀ ದೇಶಕ್ಕೇ ತಿಳಿದಿದೆ. ಕಿಕ್ ಬ್ಯಾಕ್, ಸೂಟ್ ಕೇಸ್ ಪಡೆದು ಅಭ್ಯಾಸ ಇರೋರು ಬೇರೆಯವರೂ ತಮ್ಮಂತೆ ಎಂದು ತಿಳಿಯುತ್ತಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯು ಈ ಹಿಂದೆ ಸಿಇಸಿ ನೀಡಿದ್ದ ನಿರ್ದೇಶನಗಳನ್ನು ಪರಿಪಾಲಿಸುವವರೆಗೆ ಉದ್ದೇಶಿತ ಸಂಡೂರು ಸ್ವಾಮಿ ಮಲೈ ವ್ಯಾಪ್ತಿಯ ದೇವದಾರಿ ಅರಣ್ಯದಲ್ಲಿ ಕೆ.ಐ.ಓ.ಸಿ.ಎಲ್.ಗೆ ಗಣಿಗಾರಿಕೆಗೆ ಒಪ್ಪಂದ ಮಾಡಿಕೊಳ್ಳದಂತೆ ನೀಡಿರುವ ನಿರ್ದೇಶನಕ್ಕೆ ಸಂಬಂಧಿಸಿದಂತೆ ‘ಕಿಕ್ ಬ್ಯಾಕ್ ಕೊಟ್ಟಿಲ್ಲ – ಹೀಗಾಗಿ ತಡೆ ಒಡ್ಡಿದ್ದಾರೆ’ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರ ಖಂಡ್ರೆ ತಾನು ಕಳ್ಳ ಪರರನ್ನು ನಂಬ ಎಂಬ ಗಾದೆ ನೆನಪಿಗೆ ತರುತ್ತದೆ ಎಂದು ಹೇಳಿದ್ದಾರೆ.
ನಾವೆಲ್ಲೂ ಕೇಂದ್ರ ಸರ್ಕಾರಿ ಸ್ವಾಮ್ಯದ ಕೆ.ಐ.ಓ.ಸಿ.ಎಲ್. ಈ ಹಿಂದೆ ನಿಯಮಗಳನ್ನು ಉಲ್ಲಂಘನೆ ಮಾಡಿದೆ, ನ್ಯಾಯಾಲಯಗಳ ಆದೇಶವನ್ನೂ ಪರಿಪಾಲನೆ ಮಾಡಿಲ್ಲ. ಹೀಗಾಗಿ ಸಿಇಸಿ ನೀಡಿರುವ ನಿರ್ದೇಶನಗಳನ್ನು ಪರಿಪಾಲನೆ ಮಾಡುವವರೆಗೆ ಒಪ್ಪಂದ ಮಾಡಿಕೊಳ್ಳದಂತೆ ತಿಳಿಸಲಾಗಿದೆ. ಅವರು ಹಿಂದೆ ಮಾಡಿರುವ ತಪ್ಪು ಸರಿಪಡಿಸಲಿ ನಂತರ ಅನುಮತಿ ಪಡೆದುಕೊಳ್ಳಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಕೆಲವು ನಾಯಕರಿಗೂ ಅಕ್ರಮ ಗಣಿಗಾರಿಕೆಗೂ ಇದ್ದ ಸಂಬಂಧ ಜಗಜ್ಜಾಹೀರಾಗಿದೆ. ಅವರೇ ಪಕ್ಷದಿಂದ ಉಚ್ಚಾಚಿಸಿದ ಗಣಿ ಧಣಿಗಳನ್ನು ಈಗ ಅಪ್ಪಿಕೊಂಡು ರತ್ನಗಂಬಳಿ ಹಾಸಿ ಪಕ್ಷಕ್ಕೆ ಮತ್ತೆ ಕರೆದುಕೊಂಡಿದ್ದಾರೆ. ಇವರು ಪ್ರಾಮಾಣಿಕತೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಎಂದು ಲೇವಡಿ ಮಾಡಿದ್ದಾರೆ.
ಸಿ.ಟಿ. ರವಿ, ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡಿದ್ದಾರೆ. ಸೂಟ್ ಕೇಸ್ ಕೊಡಲಿ ಎಂದು ನಾವು ತಡೆ ಒಡ್ಡಿದ್ದೇವೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಎಷ್ಟು ಖಾಸಗಿ ಗಣಿಗಾರಿಕೆಗೆ ಅನುಮತಿ ಕೊಟ್ಟಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದಕ್ಕೆಲ್ಲಾ ಇವರು ಎಷ್ಟೆಷ್ಟು ಸೂಟ್ ಕೇಸ್ ಪಡೆದಿದ್ದರು ಎಂದು ಹೇಳಲಿ. ಪಾಪ ಸಿ.ಟಿ. ರವಿ ತಮ್ಮ ಅನುಭವ ಹೇಳಿಕೊಂಡಿದ್ದಾರೆ ಎಂದು ಕಾಣುತ್ತದೆ ಎಂದು ಕುಹಕವಾಡಿದ್ದಾರೆ.
ಚಿಕ್ಕಮಗಳೂರು ಸುತ್ತಮುತ್ತ ಶುಂಠಿ ಬೆಳೆಯೋ ಹೆಸರಲ್ಲಿ ಮರ ಕಡಿಯುವವರ ಮತ್ತು ಅರಣ್ಯ ಒತ್ತುವರಿ ಮಾಡುವವರ ಬೆಂಬಲಕ್ಕೆ ಯಾರು ನಿಂತಿದ್ದಾರೆ ಎಂಬುದು ಜನತೆಗೆ ತಿಳಿದಿದೆ. ಎಲ್ಲವೂ ಶೀಘ್ರ ಹೊರಬರಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.