Search

LAKSHMI HEBBALKAR ABOUT CM CHANGE: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನಮ್ಮ ಪಕ್ಷದ ಎರಡು ಕಣ್ಣುಗಳಿದ್ದಂತೆ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರೂ ನಮ್ಮ ಪಕ್ಷದ ಎರಡು ಕಣ್ಣುಗಳಿದ್ದಂತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಕೊರೊನಾ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಮಾಸ್ ಲೀಡರ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಬ್ಬರೂ ಕಾಂಗ್ರೆಸ್ ನ ಎರಡೂ ಕಣ್ಣು ಇದ್ದ ಹಾಗೆ‌. ಸಿದ್ದರಾಮಯ್ಯನವರು ನಮ್ಮ ಪಕ್ಷ ಕೊಟ್ಟ ಮಾತಿನಂತೆ ಅತ್ಯಂತ ಸಮರ್ಥವಾಗಿ ಯೋಜನೆಗಳನ್ನು ಜಾರಿ ಮಾಡಿ ಸಮರ್ಥವಾಗಿ ಆಡಳಿತ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.

ನಮ್ಮ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಒಳ್ಳೆಯ ಮುಖ್ಯಮಂತ್ರಿಯನ್ನು ನೇಮಕ ಮಾಡಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೆ ಅಂತಿಮ. ಈಗಾಗಲೇ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಯನ್ನು ಕಾಂಗ್ರೆಸ್ ಈಡೇರಿಸಿ ಮುಂದೆ ಹೋಗುತ್ತಿದ್ದೇವೆ ಎಂದರು.
ನಾನು ತಳಮಟ್ಟದದಿಂದ ಬಂದ ಕಾರ್ಯಕರ್ತೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ ಎಂದು ಅವರು ಹೇಳಿದರು.
ವಿಷ ಕನ್ಯೆ ಎಂಬ ಪದ ಬಳಿಕೆ ಮಾಡಿರುವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ಅವರ ಸಂಸ್ಕೃತಿ ಎಂಥದ್ದು ಎಂದು ರಾಜ್ಯದ ಜನರು ನೋಡಿದ್ದಾರೆ ಎಂದು ಹೆಬ್ಬಾಳ್ಕರ್ ಟಾಂಗ್ ನೀಡಿದರು. ನಾನು ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಜನರೇ ತಕ್ಕ ಉತ್ತರ ಕೊಡುತ್ತಾರೆ. ಭಾರತ ದೇಶದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟವರು ನಾವು. ಅವರು ವಿಷ ಕನ್ಯೆ ಅಂತಾರೋ, ಇನ್ನೊಂದು ಕನ್ಯೆ ಅಂತಾರೋ, ಅವರು ಏನು, ಅವರ ಸಂಸ್ಕೃತಿ ಏನು ಎನ್ನುವುದನ್ನು ಇಡೀ ರಾಜ್ಯದ ಜನರು ನೋಡಿದ್ದಾರೆ. ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ ಎಂದರು.
ಚುನಾವಣೆಯಲ್ಲಿ ದುಡ್ಡು ಹಂಚಿದ್ದೀರಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ, ನಮ್ಮ ಬಳಿ ಎಲ್ಲಿ ದುಡ್ಡಿದೆ? ನಾನು ಹೆಸರಿಗಷ್ಟೆ ಲಕ್ಷ್ಮೀ ನನ್ನ ಬಳಿ ಹಣ ಇಲ್ಲ. ಅವರಿಗೆ ಸಾಹುಕಾರ್ ಅಂತಾರೆ. ಸಾಹುಕಾರಗಳು ಅವರಲ್ವಾ ಎಂದು ಪ್ರಶ್ನಿಸಿದರು. ನಾನು ಯಾರ ಬಳಿಯಾದರೂ ಹಣ ತೆಗೆದುಕೊಂಡಿದ್ದರೆ ದಾಖಲೆ ಕೊಡಲಿ ಆಮೇಲೆ ಮಾತನಾಡುತ್ತೇನೆ ಎಂದರು.

ನಿಮಗೆ ಸೊಕ್ಕು ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರ ಸೊಕ್ಕಿನಿಂದ ಏನಾಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಮತಗಳಿಂದ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದರು. ಬಳಿಕ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲಿ ಶತಾಯಗತಾಯ ನನ್ನನ್ನು ಸೋಲಿಸಬೇಕು ಎಂದು ಬಂದಿದ್ದರು. ಅದಕ್ಕೆ ಜನ ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. 2018ರಲ್ಲಿ ನಾನೇ ಗೆಲ್ಲಿಸಿದ್ದು, ಈಗ ನಾನೇ ಸೋಲಿಸುತ್ತೇನೆ ಎಂದಿದ್ದರು. ಗೆದ್ದರೆ ದೊಡ್ಡ ಹಾರವನ್ನು ತಂದು ಲಕ್ಷ್ಮೀ ಹೆಬ್ಬಾಳ್ಕರ್ ಕೊರಳಿಗೆ ಹಾಕುತ್ತೇನೆ ಎಂದಿದ್ದರು. ಇಲ್ಲಿಯವರೆಗೂ ನಾನು ಹಾರ ಎಲ್ಲಿದೆ ಎಂದು ಕಾಯುತ್ತಿದ್ದೇನೆ. ಗೆದ್ದ ಮೇಲೂ ನಾನೂ ಉತ್ತರ ಕೊಡಲಿಲ್ಲ. ಈಗೂ ಉತ್ತರ ಕೊಡಲ್ಲ. ಕಾಲಾಯ ತಸ್ಮಯೇ ನಮಃ ಯಾರಿಗೆ ಸೊಕ್ಕು ಬಂದಿದೆ.‌ ಯಾರು ಏನು ಮಾಡಿದ್ದಾರೆ ಎನ್ನುವ ಉತ್ತರ ಸಿಗಲಿದೆ ಎಂದರು.
ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಎಂದರೆ ಯುದ್ಧದಲ್ಲಿ ಸೋಲನ್ನು ಒಪ್ಪಿಕೊಂಡು ಶಸ್ತ್ರಾಸ್ತ್ರವನ್ನು ತ್ಯಾಗ ಮಾಡಿದಾಗ ಅದು ಸೋಲು. ಸೊಲನ್ನು ಸಹ ಸಮಾನವಾಗಿ ಸ್ವೀಕಾರ ಮಾಡಿ ಗೆಲುವಿನ‌ ಮುನ್ನಡಿಯನ್ನು ಬರೆದಿರುವುದು ಜನರಿಗೆ ಗೊತ್ತಿದೆ.ಈಗ ನನ್ನ ಮಗ ಸೋಲು ಕಂಡಿದ್ದಾನೆ. ಎಲ್ಲಿ ಸೋಲು ಕಂಡಿದ್ದಾನೋ ಅಲ್ಲಿಯೇ ಗೆಲ್ಲಬೇಕು ಎನ್ನುವ ಛಲ ನನ್ನ ಮಗ ಮಾಡಿದ್ದಾನೆ. ಇದೊಂದೆ ಸೋಲಿನಿಂದ ಕಂಗೇಡುವಂತಿಲ್ಲ. ನಾವು ಮೌನಕ್ಕೆ ಜಾರಿರುವುದು ಏಕೆಂದರೆ ಎಲ್ಲಿ ನಮ್ಮಿಂದ ತಪ್ಪಾಗಿದೆ ಎನ್ನುವುದನ್ನು ಹುಡುಕುತ್ತಿದ್ದೇವೆ ಎಂದರು.

ಮಹಿಳಾ ಕೋಟಾದಲ್ಲಿ ಉಪಮುಖ್ಯಮಂತ್ರಿಯಾಗುತ್ತೀರಾ, ನಿಮ್ಮಲ್ಲಿ ಆ ಅರ್ಹತೆ ಇದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ನಾನು ಆಸೆ ಪಟ್ಟರೆ ಡಿಸಿಎಂ ಮಾಡಿ ಬಿಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ನನಗೆ ಏನೇ ಸ್ಥಾನಮಾನ ಕೊಡುವುದಿದ್ದರೂ ಹೈಕಮಾಂಡ್ ತೀರ್ಮಾನ. ರಾಜ್ಯದಲ್ಲಿ ನನಗೆ ದೊಡ್ಡ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಹೈಕಮಾಂಡ್ ಕೊಟ್ಟಿದೆ. ಅದನ್ನು ನಿಭಾಯಿಸುತ್ತೇನೆ. ನಾನು‌ ಮುಗಿಲಿಗೆ ಏಣಿ ಹಾಕುವವಳಲ್ಲ ಎಂದು ಉತ್ತರಿಸಿದರು.

More News

You cannot copy content of this page