Search

MB Patil: ಏಥರ್ ಕಂಪನಿ ರಾಜ್ಯ ತೊರೆಯಲು ಬೊಮ್ಮಾಯಿ ಸರಕಾರ ಕಾರಣ: ಎಂ ಬಿ ಪಾಟೀಲ

ಬೆಂಗಳೂರು: ವಿದ್ಯುತ್ ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಏಥರ್ ಕಂಪನಿಯು ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಮಾಡಿರುವುದಕ್ಕೆ ಹಿಂದಿನ ಬಿಜೆಪಿ ಸರಕಾರದ ವೈಫಲ್ಯವೇ ಮೂಲಕಾರಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯ ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿಯಿಂದಾಗಿ ಏಥರ್ ಕಂಪನಿ ರಾಜ್ಯದಿಂದ ಕಾಲ್ತೆಗೆದಿದೆ ಎಂದು ಮಾಡಿರುವ ಆರೋಪಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸರಕಾರವಿದ್ದಾಗ ಏಥರ್ ಕಂಪನಿಯು ತನ್ನ ಘಟಕ ಸ್ಥಾಪಿಸಲು 50 ಎಕರೆ ಜಮೀನು ಕೇಳಿತ್ತು. ಆದರೆ ಅವರ ಸರಕಾರವು ಕೇವಲ 35 ಎಕರೆ ಮಂಜೂರು ಮಾಡಿತು. ಇದರಲ್ಲೂ ಐದು ಎಕರೆ ವಿವಾದಕ್ಕೆ ಒಳಗಾಗಿತ್ತು. ಇದರಿಂದ ರೋಸಿ ಹೋದ ಕಂಪನಿಯು ಇಡೀ 35 ಎಕರೆಯನ್ನು ಸರಕಾರಕ್ಕೆ ವಾಪಸ್ ಒಪ್ಪಿಸಿತು. ಇದಾದ ಮೇಲೆ ಆ ಕಂಪನಿಯು ಬೇರೆಬೇರೆ ಕಾರಣಗಳಿಗೋಸ್ಕರ ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿ ಹೂಡಿಕೆ ಮಾಡುವ ತೀರ್ಮಾನ ಕೈಗೊಂಡಿತು ಎಂದು ಅವರು ವಿವರಿಸಿದ್ದಾರೆ.

ಹಿಂದೆ 2017ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವಿ ನೀತಿ ಮಾಡಲಾಯಿತು. ಅದರ ನಂತರ ಬಂದ ಬಿಜೆಪಿ ಸರಕಾರವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ‌ ಮಾಡಲಿಲ್ಲ. ಎಲ್ಲದರಲ್ಲೂ ವಿಫಲವಾಗಿತ್ತು. ಈಗ ಆ ಪಕ್ಷದ ನಾಯಕರು ಏಥರ್ ಕಂಪನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಕಾಲದಲ್ಲಿ ಓಲಾ ಕಂಪನಿಯು ರಾಜ್ಯದಿಂದ ತಮಿಳುನಾಡಿಗೆ ಹೋಯಿತು. ಬೆಲ್ಲದ್ ಅವರು ಇದನ್ನು ನೆನಪು ಮಾಡಿಕೊಳ್ಳಬೇಕು ಎಂದು ಅವರು ಕುಟುಕಿದ್ದಾರೆ.

ಇಷ್ಟಾದರೂ ನಾವು ಏಥರ್ ಕಂಪನಿಗೆ ನಮ್ಮ ಸರಕಾರ ಬಂದಮೇಲೆ ಏಕಗವಾಕ್ಷಿ ಯೋಜನೆಯಡಿ ಹರಳೂರು-ಮುದ್ದೇನಹಳ್ಳಿ ನಡುವೆ 50 ಎಕರೆ ಜಮೀನು ಕೊಡುವುದಾಗಿ ಹೇಳಲಾಗಿತ್ತು. ಆ ವೇಳೆಗಾಗಲೇ ಅವರು ಮಹಾರಾಷ್ಟ್ರ ಕ್ಕೆ ಹೋಗಿ ಆಗಿತ್ತು ಎಂದು ಅವರು ರಾಜ್ಯಕ್ಕೆ ಬರಲು ಹಿಂದೇಟು ಹಾಕಿದರು ಎಂದು ಪಾಟೀಲ ಹೇಳಿದ್ದಾರೆ.

More News

You cannot copy content of this page