Search

₹456 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ಮುಂದಿನ ವರ್ಷ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಘಟಕ ಆರಂಭಿಸಲು ಬದ್ಧತೆ ತೋರಿದ ನಿಡೆಕ್‌ ಕಾರ್ಪೊರೇಷನ್‌

ಬೆಂಗಳೂರು: ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ತನ್ನ ಜಪಾನ್‌ ಭೇಟಿಯ 5ನೇ ದಿನ ಪಾನಾಸೋನಿಕ್‌ ಎನರ್ಜಿ, ನಿಡೆಕ್‌ ಕಾರ್ಪೊರೇಷನ್‌, ಶಿಮಡ್ಜು ಕಾರ್ಪೊರೇಷನ್‌, ಒಸಾಕಾ ಗ್ಯಾಸ್‌, ಜಾಯಿನ್‌ ಮತ್ತು ಸುಮಿತೊಮೊ ಕಾರ್ಪೋರೇಷನ್‌ ಕಂಪನಿಗಳ ಪ್ರಮುಖರನ್ನು ಭೇಟಿಯಾಗಿ ಫಲಪ್ರದ ಸಮಾಲೋಚನೆ ನಡೆಸಿತು.

ಆವಿಷ್ಕಾರ ಮುನ್ನಡೆ, ಸುಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ಕರ್ನಾಟಕ ರಾಜ್ಯವು ಸರ್ವ ರೀತಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರುವುದನ್ನು ಈ ಸರಣಿ ಸಭೆಗಳಲ್ಲಿ ಜಪಾನಿನ ಬಹುರಾಷ್ಟ್ರೀಯ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಬ್ಯಾಟರಿ ತಯಾರಿಕೆ ಹಾಗೂ ನವೀಕರಿಸಬಹುದಾದ ಇಂಧನ ಉತ್ಪನ್ನಗಳನ್ನು ತಯಾರಿಸುವ ಪಾನಾಸೋನಿಕ್‌ ಎನರ್ಜಿಯು ಬ್ಯಾಟರಿ ಬಿಡಿಭಾಗ ಪೂರೈಕೆ ಹೆಚ್ಚಿಸಲು ಬೆಂಗಳೂರಿನ ನವೋದ್ಯಮಗಳಾದ ನೊಪೊ ಮತ್ತು ಲಾಗ್‌9 ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಅಗತ್ಯ ನೆರವು ಒದಗಿಸಲಿದೆ ಎಂದು ಸಚಿವ ಪಾಟೀಲ ಅವರು ಕಂಪನಿಯ ನಿರ್ದೇಶಕ ನಕಾನಿಶಿ ಮತ್ತು ಜನರಲ್‌ ಮ್ಯಾನೇಜರ್‌ ನರುಸೆ ಅವರಿಗೆ ಭರವಸೆ ನೀಡಿದರು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಂತಹ ಸಂಶೋಧನಾ ಸಂಸ್ಥೆಗಳ ಜೊತೆಗಿನ ಸಹಯೋಗದ ಸಾಧ್ಯತೆಗಳನ್ನೂ ಚರ್ಚಿಸಲಾಯಿತು.

ವಿದ್ಯುತ್‌ಚಾಲಿತ ಮೋಟರ್ಸ್‌ ಮತ್ತು ಸಂಬಂಧಿತ ಬಿಡಿಭಾಗಗಳನ್ನು ತಯಾರಿಸುವ ನಿಡೆಕ್‌ ಕಾರ್ಪೊರೇಷನ್‌ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಲು ಒಲವು ವ್ಯಕ್ತಪಡಿಸಿದೆ. ಕಂಪನಿಯು ₹456 ಕೋಟಿ (55 ದಶಲಕ್ಷ ಡಾಲರ್‌) ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ 2025ರ ವೇಳೆಗೆ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಘಟಕ ಆರಂಭಿಸುವ ಬಗ್ಗೆ ಬದ್ಧತೆ ತೋರಿದೆ. ನಿಡೆಕ್‌ ಸಮೂಹದ ಕಂಪನಿಗಳಿಗೆ ಸಾಫ್ಟ್‌ವೇರ್‌ ಒದಗಿಸುವ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ (ಆರ್‌ಆ್ಯಂಡ್‌ಡಿ) ಸ್ಥಾಪಿಸಲು ರಾಜ್ಯದಲ್ಲಿ ಅಗತ್ಯವಾದ ನೆರವು ಕಲ್ಪಿಸಲಾಗುವುದು ಎಂದೂ ಸಚಿವರು ಭರವಸೆ ನೀಡಿದರು.

ಒಸಾಕಾ ಗ್ಯಾಸ್‌ ಕಂಪನಿಯು ಭಾರತದಲ್ಲಿ ಈಗಾಗಲೇ ₹1,992 ಕೋಟಿ ಹೂಡಿಕೆ ಮಾಡಿದ್ದು, ಮುಂದಿನ 5 ವರ್ಷಗಳಲ್ಲಿ ₹4,980 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ರಾಜ್ಯದಲ್ಲಿ ಕಂಪನಿಯ ಗೃಹ ಮತ್ತು ಕೈಗಾರಿಕಾ ಬಳಕೆಯ ಅನಿಲ ಉತ್ಪಾದನಾ ಘಟಕಗಳ ವಿಸ್ತರಣೆಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ನಿಯೋಗವು ತಿಳಿಸಿದೆ.

ಶಿಮಡ್ಜು ಕಾರ್ಪೊರೇಷನ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಕತ್ಸುಅಕಿ ಕೈಟೊ ಅವರ ಜೊತೆಗೆ ನಿಯೋಗವು ಸಮಾಲೋಚನೆ ನಡೆಸಿತು. ರಾಜ್ಯದಲ್ಲಿ ತನ್ನ ವಹಿವಾಟು ಹಾಗೂ ಸಂಶೋಧನೆ ಹಾಗೂ ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಚಟುವಟಿಕೆ ವಿಸ್ತರಿಸಲು ಕಂಪನಿಯು ತೀವ್ರ ಆಸಕ್ತಿ ಹೊಂದಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮತ್ತು ಸುಧಾರಿತ ವೈದ್ಯಕೀಯ ತಂತ್ರಜ್ಞಾನದ ವಿಸ್ತರಣಾ ಯೋಜನೆಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಪರವಾಗಿ ಭರವಸೆ ನೀಡಲಾಗಿದೆ.
ಜಪಾನಿನ ಕಂಪನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಅಗತ್ಯ ನೆರವು ಒದಗಿಸಲಾಗುವುದು ಎಂದು ಜಾಯಿನ್‌ (JOIN) ಪ್ರತಿನಿಧಿಗಳು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.ರೇಷನ್‌: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ನಿಡೆಕ್‌ ಕಾರ್ಪೊರೇಷನ್ನಿನ ಸಿಇಒ ಮಿತ್ಸುಯಾ ಕಿಶಿಡಾ, ಕಾರ್ಯನಿರ್ವಾಹಕ ಉಪಾಧ್ಯಕ್ಷ ತತ್ಸುಯಾ ನಿಶಿಮೊತೊ ಅವರನ್ನು ಜಪಾನಿನ ಒಸಾಕಾದಲ್ಲಿ ಶುಕ್ರವಾರ ಭೇಟಿಯಾಗಿದ್ದರು. ಕರ್ನಾಟಕದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಉಪಸ್ಥಿತರಿದ್ದರು

ಚಿತ್ರಶೀರ್ಷಿಕೆ ಎಂಬಿಪಿ: ವೈದ್ಯಕೀಯ ಉಪಕರಣಗಳನ್ನೂ ತಯಾರಿಸುವ ಶಿಮಡ್ಜು ಕಾರ್ಪೊರೇಷನ್ನಿನ ಕ್ಯುಟೊ ಘಟಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಸಾಧನ ಪರಿಶೀಲಿಸಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ಚಿತ್ರಶೀರ್ಷಿಕೆ ನಿಡೆಕ್‌ ಕಾರ್ಪೊರೇಷನ್‌: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ನಿಡೆಕ್‌ ಕಾರ್ಪೊರೇಷನ್ನಿನ ಸಿಇಒ ಮಿತ್ಸುಯಾ ಕಿಶಿಡಾ, ಕಾರ್ಯನಿರ್ವಾಹಕ ಉಪಾಧ್ಯಕ್ಷ ತತ್ಸುಯಾ ನಿಶಿಮೊತೊ ಅವರನ್ನು ಜಪಾನಿನ ಒಸಾಕಾದಲ್ಲಿ ಶುಕ್ರವಾರ ಭೇಟಿಯಾಗಿದ್ದರು.

More News

You cannot copy content of this page