Search

ರಾಜ್ಯದ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಲಿರುವ ರಿವರ್‌ ಕಂಪನಿಯಲ್ಲಿನ ಯಮಹಾ ಕಂಪನಿಯ ಹೂಡಿಕೆ ಹಾಗೂ ರಾಜ್ಯದಲ್ಲಿನ ನವೋದ್ಯಮಗಳ ಜೊತೆಗಿನ ಪಾಲುದಾರಿಕೆ

ಬೆಂಗಳೂರು: ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಜಪಾನಿನ ಬಹುರಾಷ್ಟ್ರೀಯ ಕಂಪನಿಗಳಾದ ಯಮಹಾ ಮೋಟರ್‌ ಕಾರ್ಪ್‌ (ವೈಎಂಸಿ), ಐಚಿ ತೋಕೆ ಹಾಗೂ ಬ್ರದರ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥರ ಜೊತೆ ನಗೋಯಾ ನಗರದಲ್ಲಿ ಗುರುವಾರ ಸರಣಿ ಸಭೆಗಳನ್ನು ನಡೆಸಿದರು.

ಈ ಕಂಪನಿಗಳ ಜೊತೆಗೆ ರಾಜ್ಯ ಸರ್ಕಾರದ ವಾಣಿಜ್ಯ ಪಾಲುದಾರಿಕೆ ವೃದ್ಧಿಸುವುದು ಮತ್ತು ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ. ಬಂಡವಾಳ ಹೂಡಿಕೆಯ ಪ್ರಮುಖ ತಾಣವನ್ನಾಗಿ ರಾಜ್ಯದ ಸ್ಥಾನಮಾನ ಬಲಪಡಿಸಲು ಈ ಸಭೆಗಳು ಗಮನಾರ್ಹ ಕೊಡುಗೆ ನೀಡಲಿವೆ.
ಬ್ರದರ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಇಚಿರೊ ಸಸಾಕಿ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮಕೊಟೊ ಹೋಶಿ ಅವರ ಜೊತೆಗಿನ ಭೇಟಿ ಸಂದರ್ಭದಲ್ಲಿ ಬೆಂಗಳೂರು ಮೂಲದ ನವೋದ್ಯಮ ಇಥೆರಿಯಲ್‌ ಮಷಿನ್ಸ್‌ ಜೊತೆ ಪಾಲುದಾರಿಕೆ ಸಾಧ್ಯತೆ ಚರ್ಚಿಸಲಾಯಿತು.
ತುಮಕೂರಿನ ಬಳಿ ಇರುವ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ (ಜೆಐಟಿ) ಕಂಪನಿಯ ಕಾರ್ಖಾನೆಯು ಈ ವರ್ಷದ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ಮಷಿನ್‌ಟೂಲ್ಸ್‌ ವಲಯದಲ್ಲಿ ವಹಿವಾಟು ವಿಸ್ತರಣೆ ಬಗ್ಗೆ ಕಂಪನಿಯು ಒಲವು ವ್ಯಕ್ತಪಡಿಸಿದೆ. ಕಂಪನಿಯು ತಯಾರಿಸುವ ಇಂಧನ ದಕ್ಷತೆಯ ಯಂತ್ರೋಪಕರಣಗಳು ವಾಹನ ಬಿಡಿಭಾಗ ತಯಾರಿಕೆಯ ಉದ್ಯಮಗಳಿಗೆ ಹೆಚ್ಚು ಸೂಕ್ತವಾಗಿರುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಆಟೊಮೊಬೈಲ್‌ ಹಾಗೂ ವಿದ್ಯುತ್‌ಚಾಲಿತ ವಾಹನ ತಯಾರಿಕಾ ವಲಯಕ್ಕೆ ರಾಜ್ಯ ಸರ್ಕಾರ ಒದಗಿಸುತ್ತಿರುವ ಉತ್ತೇಜಕರ ರಿಯಾಯ್ತಿ ಹಾಗೂ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಸಚಿವರು ಯಮಹಾ ಕಂಪನಿಗೆ ಮನವಿ ಮಾಡಿಕೊಂಡರು. ʼವೈಎಂಸಿʼಯ ಹೊಸ ಉದ್ದಿಮೆ ಅಭಿವೃದ್ಧಿ ಕೇಂದ್ರದ ಚೀಫ್‌ ಜನರಲ್‌ ಮ್ಯಾನೇಜರ್‌ ಹಜಿಮೆ ಆವೊಟಾ, ಸಂಚಾರ ಸೇವಾ ವಹಿವಾಟಿನ ಜನರಲ್‌ ಮ್ಯಾನೇಜರ್‌ ಶುಂಗೊ ತೆರಜಿಮಾ ಮತ್ತಿತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಅನಿಲ, ನೀರಿನ ಮೀಟರ್‌ ಸೇರಿದಂತೆ ಅತ್ಯಾಧುನಿಕ ಅಳತೆ ಹಾಗೂ ನಿಯಂತ್ರಣ ಸಾಧನಗಳ ತಯಾರಿಸುವ ಐಚಿ ತೋಕೆ ಡೆಂಕಿ ಕಂಪನಿ ಜೊತೆಗಿನ ಮಾತುಕತೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ತಲೆದೋರುವ ನೀರಿನ ಕೊರತೆ ಸಮಸ್ಯೆ ನೀಗಿಸುವ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಾಯಿತು.
ಕಂಪನಿಯ ನೀರಿನ ಸಲಕರಣೆ ಮಾರಾಟ ವಿಭಾಗದ ಜನರಲ್‌ ಮ್ಯಾನೇಜರ್‌ ಕಜುಹಿಸಾ ಇಸೊಮುರಾ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಕಜುಹಿಸಾ ಮೊರಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಮೂಲಸೌಲಭ್ಯ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲುದಾರಿಕೆ ಬಗ್ಗೆ ಕಂಪನಿಯು ಒಲವು ವ್ಯಕ್ತಪಡಿಸಿದೆ. ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಹಾಗೂ ನಗರಾಭಿವೃದ್ಧಿ ಇಲಾಖೆಯ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿನ ಲೆಕ್ಕಕ್ಕೆ ಸಿಗದ ಪೋಲು ತಪ್ಪಿಸಿ, ನೀರಿನ ಕೊರತೆಗೆ ಕಡಿವಾಣ ಹಾಕಲು ಈ ಕಂಪನಿಯ ನೆರವು ಪಡೆಯಲಾಗುವುದು.
ಕಂಪನಿ ತಯಾರಿಸುವ ಗರಿಷ್ಠ ಸಾಮರ್ಥ್ಯದ ಯುವಿ ತಂತ್ರಜ್ಞಾನದ ನೀರಿನ ಮೀಟರ್‌ಗಳು ನೀರಿನ ಅಭಾವ ನಿವಾರಿಸಲು ನೆರವಾಗಲಿವೆ.

ಕರ್ನಾಟಕದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರೂ ಈ ಮಾತುಕತೆಗಳಲ್ಲಿ ಭಾಗಿಯಾಗಿದ್ದರು.

More News

You cannot copy content of this page