Visakhapatnam Steel Plant (RNIL) Revival: ವೈಜಾಗ್ ಉಕ್ಕು ಕಾರ್ಖಾನೆ (RNIL) ಪುನಶ್ಚೇತನ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಭೆ

ನವದೆಹಲಿ: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವೈಜಾಗ್ ಉಕ್ಕು ಕಾರ್ಖಾನೆ ((Rashtriya Ispat Nigam Ltd-RNIL) ಯ ಪ್ರಗತಿ ಪರಿಶೀಲನೆ ನಡೆಸಿದರು.

ಉಕ್ಕು ಸಚಿವಾಲಯದ ವ್ಯಾಪ್ತಿಗೆ ಬರುವ ಈ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸುವ ಹಾಗೂ ಆರ್ಥಿಕವಾಗಿ ಕಂಪನಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳ ಜತೆಗೆ ಸಚಿವರು ಮಹತ್ವದ ಸಭೆ ನಡೆಸಿದರು.

ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಯನ್ನು ಮೇಲೆತ್ತುವ ಸಲುವಾಗಿ ಉಕ್ಕು ಉತ್ಪಾದನೆಯನ್ನು ಹೆಚ್ಚಳ ಮಾಡಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ; ಕಂಪನಿಯ ಕಾರ್ಯ ಚಟುವಟಿಕೆ, ಆರ್ಥಿಕ ಸ್ಥಿತಿಗತಿ, ಉತ್ಪಾದನೆ, ಹೊಸ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಹಾಜರಿದ್ದ ಕಂಪನಿಯ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಿಂದ ಸಮಗ್ರ ಮಾಹಿತಿ ಪಡೆದುಕೊಂಡ ಸಚಿವರು; ಮೊದಲು ಉತ್ಪಾದನೆ ಹೆಚ್ಚಳ, ಕ್ಷಮತೆ ವೃದ್ಧಿಸಿಕೊಳ್ಳುವ ಕೆಲಸ ಮಾಡಿ, ನಂತರ ಆರ್ಥಿಕವಾಗಿ ಕಂಪನಿಗೆ ಹೇಗೆ ನೆರವಾಗಬೇಕು ಎನ್ನುವುದು ಆಲೋಚನೆ ಮಾಡುತ್ತೇವೆ ಎಂದು ಹೇಳಿದರು.

ಅಲ್ಲದೆ, ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬೇಕು ಎಂದು ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಗುರಿ ನಿಗದಿ ಮಾಡಿದ್ದು; ಈ ಗುರಿ ಮುಟ್ಟುವ ಬಗ್ಗೆ ನಾವು ಅವಿರತವಾಗಿ ಕೆಲಸ ಮಾಡಬೇಕು. ಅದಕ್ಕೆ ಪೂರಕವಾಗಿ ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಕ್ಕು ಕ್ಷೇತ್ರದಲ್ಲಿ ಚೀನಾ ಒಡ್ಡುತ್ತಿರುವ ಪೈಪೋಟಿಯನ್ನು ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡಿದ ಸಚಿವರು; ದೇಶೀಯವಾಗಿ ಉಕ್ಕು ಕ್ಷೇತ್ರವನ್ನು ಬಲಪಡಿಸಬೇಕು. ಸ್ಪೆಶಾಲಿಟಿ ಸ್ಟೀಲ್ ಮತ್ತು ಗ್ರೀನ್ ಸ್ಟೀಲ್ ಉತ್ಪಾದನೆಗೆ ನಾವು ಹೆಚ್ಚು ಒತ್ತು ಕೊಡಬೇಕಿದೆ. ತಾಂತ್ರಿಕ ಮತ್ತು ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸವಾಲುಗಳನ್ನು ಎದುರಿಸಬೇಕಿದೆ. ಕಾರ್ಖಾನೆ ಪುನಶ್ಚೇತನಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಿ ಎಂದರು.

ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀನಿವಾಸ್ ಭೂಪತಿರಾಜು ವರ್ಮ, ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರ ನಾಥ ಸಿನ್ಹಾ, ಹೆಚ್ಚುವರಿ ಕಾರ್ಯದರ್ಶಿ ಸುಕೃತಿ ಲಿಖಿ, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್, ವಿಶಾಖಪಟ್ಟಣ ಉಕ್ಕು ಕಾರ್ಖಾನೆಯ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ ಅತುಲ್ ಭಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮನವಿ ಸಲ್ಲಿಸಿದ್ದ ಆಂಧ್ರ ಸಂಸದರು

ಕೆಲ ದಿನಗಳ ಹಿಂದೆ ಕೇಂದ್ರ ಸಚಿವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದ ಆಂಧ್ರ ಪ್ರದೇಶದ ಸಂಸದರಾದ ಪುರಂದೇಶ್ವರಿ ಅವರ ನೇತೃತ್ವದ ನಿಯೋಗವು, ವಿಶಾಖಪಟ್ಟಣ ಉಕ್ಕು ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಮನವಿ ಸಲ್ಲಿಸಿದ್ದರು.

More News

You cannot copy content of this page